ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಪರವಾನಿಗೆ ನವೀಕರಣ ಮಾಡದ ಪಪಂ: ರಾಜಕುಮಾರ್
ಸಾಗರ,ಆ.1: ಜೋಗ ಜಲಪಾತದ ಆಸುಪಾಸಿನಲ್ಲಿ ನಾವು ಹೋಮ್‌ಸ್ಟೇ, ಲಾಡ್ಜ್ ಗಳನ್ನು ನಡೆಸುತ್ತಿದ್ದೇವೆ. ಸ್ಥಳೀಯ ಪಟ್ಟಣ ಪಂಚಾಯತ್‌ಗೆ ಪರವಾನಿಗೆ ನವೀಕರಣ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ ವರ್ಷ ಕಳೆದಿದ್ದರೂ ಈತನಕ ನವೀಕರಣ ಮಾಡಿಕೊಟ್ಟಿಲ್ಲ ಎಂದು ಜೋಗ ವಸತಿ ಮಾಲಕರ ಸಂಘದ ಅಧ್ಯಕ್ಷ ರಾಜಕುಮಾರ್ ಎಸ್.ಎಲ್. ಹೇಳಿದ್ದಾರೆ.
ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಗ ಜಲಪಾತದ ಅಕ್ಕಪಕ್ಕದಲ್ಲಿ 18 ಹೋಮ್‌ಸ್ಟೇ, ಲಾಡ್ಜ್ ನಡೆಯುತ್ತಿವೆ. ಎಲ್ಲಿಯೂ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಪಪಂ ಅಧ್ಯಕ್ಷ ವೆಂಕಟೇಶ್ ಪುತ್ತ ಪರವಾನಿಗೆ ನವೀಕರಣ ಮಾಡಲು 20 ಸಾವಿರ ರೂ. ಲಂಚ ಕೇಳುತ್ತಿದ್ದಾರೆ. ಪಪಂ ಮಾಜಿ ಅಧ್ಯಕ್ಷ ಹರೀಶ್ ಗೌಡ ಹಾಗೂ ಕಾರ್ಮಿಕ ಮುಖಂಡ ಸಾ.ಮ. ಇಲಿಯಾಸ್ ಎಂಬವರು ಪ್ರತಿ ತಿಂಗಳು ಹಫ್ತಾ ನೀಡುವಂತೆ ಒತ್ತಡ ತರುತ್ತಿದ್ದಾರೆ. ಇದರಿಂದ ಉದ್ಯಮ ನಡೆಸುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ನಮ್ಮ ವಸತಿ ಮಾಲಕರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಹೋಮ್‌ಸ್ಟೇ, ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ. ಆದರೆ ಸರಕಾರದ ಹದ್ದುಬಸ್ತಿನಲ್ಲಿ ನಡೆಯುತ್ತಿರುವ ವಸತಿಗೃಹಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆೆ. ಅಲ್ಲಿ ಕೆಲಸ ಮಾಡುವ ನೌಕರರು ಗುಪ್ತವಾಗಿ ಅನೈತಿಕ ಚಟುವಟಿಕೆಗಳಿಗೆ ಹಣ ಪಡೆದು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ನಮ್ಮ ವ್ಯಾಪ್ತಿಯಲ್ಲಿ ಬರುವ ಹೋಮ್‌ಸ್ಟೇ, ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದು ಗಮನಕ್ಕೆ ಬಂದರೆ ಅವರನ್ನು ಸಂಘದಿಂದ ಹೊರಗೆ ಹಾಕುವ ಜೊತೆಗೆ ಕ್ರಮ ಜರಗಿಸಲಾಗುತ್ತದೆ. ನಾವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತವಾದ ಲಾಡ್ಜ್‌ಗಳನ್ನು ನಿರ್ಮಾಣ ಮಾಡಿದ್ದೇವೆ. ಬರುವ ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಆದರೆ ನಮಗೆ ಉದ್ಯಮ ನಡೆಸಲು ಸ್ಥಳೀಯವಾಗಿ ಅವಕಾಶ ನೀಡುತ್ತಿಲ್ಲ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಭಟ್, ಉಪಾಧ್ಯಕ್ಷ ಬಿ.ಲಕ್ಷ್ಮಣ, ಪರ್ತೋಡಾ ಫೆರ್ನಾಂಡಿಸ್, ಇರ್ಫಾನ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.







