‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯ’
ಸಾಗರ, ಆ.1: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಹೊಸದಾಗಿ ಗುತ್ತಿಗೆ ಕಾರ್ಮಿಕರನ್ನು ಸೇರಿಸಿಕೊಂಡಿದ್ದು, ಅವರಿಗೆ ಕಡಿಮೆ ವೇತನ ಹಾಗೂ ಪಿಎಫ್ ಕಟ್ಟುವಲ್ಲಿ ಗುತ್ತಿಗೆದಾರ ಸಂಸ್ಥೆಗಳು ಅನ್ಯಾಯವೆಸಗುತ್ತಿದೆ ಎಂದು ಕಾರ್ಗಲ್-ಜೋಗ್ ಪಪಂ ಮಾಜಿ ಸದಸ್ಯ ಎಸ್.ಎಲ್.ರಾಜಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಕರೆಯಲಾಗಿದ್ದ ಮಾತನಾಡಿದ ಅವರು, ಹಿಂದೆ ಕೆಪಿಸಿಗೆ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಂಡ ಸಂಸ್ಥೆ ಪಿಎಫ್ ಪಾವತಿ ಮಾಡದೆ ನೌಕರರಿಗೆ ಅನ್ಯಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟದ ಮೂಲಕ ಅವರಿಗೆ ಪಿಎಫ್ ಕೊಡಿಸಲಾಗಿದೆ ಎಂದರು. ಈ ಸಾಲಿನಲ್ಲಿ ಹರ್ಯಾಣದ ಸೆಕ್ಯುರಿಟಿ ಏಜೆನ್ಸಿ ಹಾಗೂ ಹೊನ್ನಾವರದ ವಿಸ್ಡಮ್ ಸೆಕ್ಯುರಿಟಿ ಏಜೆನ್ಸಿ ಗುತ್ತಿಗೆ ಕಾರ್ಮಿಕರನ್ನು ಪೂರೈಸುವ ಗುತ್ತಿಗೆ ಹಿಡಿದಿದೆ. ಈಗಾಗಲೇ 94 ನೌಕರರನ್ನು ವಿವಿಧ ಕೆಲಸಗಳಿಗೆ ನೇಮಕ ಮಾಡಿಕೊಳ್ಳಲಾಗಿದೆ. ಕೇಂದ್ರ ಸರಕಾರದ ಹೊಸ ಕಾಯ್ದೆ ಪ್ರಕಾರ ಪ್ರತಿ ನೌಕರರಿಗೆ 11,590 ರೂ. ವೇತನ ಕೊಡಬೇಕು. ಆದರೆ 5,900 ರೂ. ವೇತನ ಕೊಡಲಾಗುತ್ತಿದೆ. ಪಿಎಫ್ ಸಹ ಕೇವಲ 500 ರೂ. ಪಾವತಿ ಮಾಡಲಾಗುತ್ತಿದೆ ಎಂದು ದೂರಿದರು. ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು ದಿನಾಂಕ 11-05-2016ಕ್ಕೆ ಕೆಪಿಸಿಯ ಚೀಫ್ ಇಂಜಿನಿಯರ್ ಶಿವಾಜಿ ಅವರಿಗೆ ಮಾಹಿತಿ ನೀಡಲಾಗಿದೆ. ಆದರೆ ಅವರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿಗಳಿಗೆ, ಇಂಧನ ಸಚಿವರಿಗೆ, ನಿಗಮದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಆದರೆ, ಈ ತನಕ ಕ್ರಮ ಕೈಗೊಂಡಿಲ್ಲ ಎಂದರು. ಕೆಪಿಸಿಗೆ ಗುತ್ತಿಗೆ ನೌಕರರನ್ನು ಪೂರೈಸುವ ಸೆಕ್ಯುರಿಟಿ ಏಜೆನ್ಸಿ ಹರ್ಯಾಣ ರಾಜ್ಯದಲ್ಲಿದೆ. ಅವರು ನೌಕರರ ಪಿಎಫ್ ಹರ್ಯಾಣದಲ್ಲಿ ಕಟ್ಟುತ್ತಿದ್ದಾರೆ. ಇದರಿಂದ ಪಿಎಫ್ ಕುರಿತು ವಿಚಾರಿಸಲು ಹರ್ಯಾಣಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಪಿಎಫ್ ಪಾವತಿಸಲು ಶಿವಮೊಗ್ಗ ಕಚೇರಿಯಲ್ಲಿ ಅವಕಾಶ ಕೊಡಬೇಕು. ನೌಕರರಿಗೆ ಕೇಂದ್ರ ಸರಕಾರದ ಮಾದರಿಯಲ್ಲಿಯೆ ವೇತನ ಪಾವತಿಸಬೇಕು ಎಂದು ಎಸ್.ಎಲ್.ರಾಜಕುಮಾರ್ ಒತ್ತಾಯಿಸಿದರು.





