ಚಿಕ್ಕಮಗಳೂರು ಜಿಲ್ಲಾ ಮೈದಾನಕ್ಕೆ ಮೂಲ ಸೌಕರ್ಯ ಕಲ್ಪಿಸಿ: ಡಿಸಿ ಜಿ. ಸತ್ಯವತಿ
ಚಿಕ್ಕಮಗಳೂರು, ಆ.1: ನಗರದ ಜಿಲ್ಲಾ ಆಟದ ಮೈದಾನಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಮೈದಾನದಲ್ಲಿ ಸ್ವಚ್ಛತೆ ಕಾಪಾಡುವಂತೆ ಜಿಲ್ಲಾಧಿಕಾರಿ ಜಿ. ಸತ್ಯವತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳ ತಂಡದೊಂದಿಗೆ ಇಂದು ಜಿಲ್ಲಾ ಆಟದ ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿದ ಅವರು, ಕ್ರೀಡಾಪಟುಗಳು ಹಾಗೂ ಮೈದಾನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಸೌಕರ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಲಿಬಾಲ್ ಕೋರ್ಟ್‌ಗೆ ಸಿಂಥೆಟಿಕ್ ನೆಲದ ಹಾಸು ನಿರ್ಮಾಣ ಮಾಡಬೇಕು. ವ್ಯಾಯಾಮ ಶಾಲೆಯನ್ನು ಕಟ್ಟಡದ ಮೇಲ್ಭಾಗಕ್ಕೆ ಸ್ಥಳಾಂತರಿಸುವುದರ ಜೊತೆಗೆ ಅದನ್ನು ಮೇಲ್ದರ್ಜೆಗೆ ಏರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಮೈದಾನದಲ್ಲಿರುವ ಶೌಚಾಲಯದ ನಿರ್ವಹಣೆಯನ್ನು ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ನೀಡಬೇಕು. ವಾಕಿಂಗ್ ಟ್ರಾಕ್ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸ ಬೇಕೆಂದು ತಾಕೀತು ಮಾಡಿದ ಜಿಲ್ಲಾಧಿಕಾರಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟ್ರಾಕ್‌ನ ಸುತ್ತ ದೀಪಗಳನ್ನು ಅಳವಡಿಸಬೇಕು. ಇದಕ್ಕೆ ಖಾಸಗಿಯವರ ಸಹಭಾಗಿತ್ವ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮೈದಾನದ ಒಳಗೆ ಜಾನುವಾರುಗಳು ಪ್ರವೇಶಿಸದಂತೆ ಪ್ರವೇಶ ದ್ವಾರದಲ್ಲಿ ಕಬ್ಬಿಣದ ಗಾರ್ಡ್‌ಗಳನ್ನು ಅಳವಡಿಸಬೇಕೆಂದು ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿನೆ ನೀಡಿದರು.
ಈ ಸಂದರ್ಭ ನಗರ ಸಭೆಯ ಪ್ರಭಾರ ಆಯುಕ್ತ ಆನಂದ್, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳ, ವಾರ್ತಾ ಧಿಕಾರಿ ಬಿ. ಮಂಜುನಾಥ್, ಇಲಾಖೆಯ ಹಲವು ಅಧಿಕಾರಿಗಳು ಹಾಜರಿದ್ದರು.







