ಸರಕಾರಿ ಕಾರು ಚಾಲಕನಿಗೆ ಜೀವನ್ ರಕ್ಷಾ ಪದಕ ಪ್ರಶಸ್ತಿ
ಶಿವಕುಮಾರ್‌ಗೆ ಉತ್ತಮ್ ಜೀವನ್ ರಕ್ಷಾ ಗರಿ
ಶಿವಮೊಗ್ಗ, ಆ. 1: ತುಂಬಿ ಹರಿಯುತ್ತಿದ್ದ ಕೆರೆ ಯಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರೊಂದರಲ್ಲಿದ್ದ ಏಳು ಜನರನ್ನು ಜೀವದ ಹಂಗು ತೊರೆದು ರಕ್ಷಿಸಿದ ಶಿವಮೊಗ್ಗದ ಸರಕಾರಿ ಕಾರು ಚಾಲಕ ಆರ್.ಶಿವಕುಮಾರ್‌ರವರು ಕೇಂದ್ರ ಸರಕಾರದ ಪ್ರತಿಷ್ಠಿತ ‘ಉತ್ತಮ್ ಜೀವನ್ ರಕ್ಷಾ ಪದಕ’ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಆಯ್ಕೆಯಾದ ದೇಶದ 9 ಜನರಲ್ಲಿ ಆರ್. ಶಿವಕುಮಾರ್‌ರವರು ಓರ್ವರಾಗಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರಾಜ್ಯದ ಏಕೈಕ ಸರಕಾರಿ ನೌಕರ. ಹಾಗೆಯೇ ಜಿಲ್ಲೆಯ ಸರಕಾರಿ ನೌಕರರ ವಲಯದಲ್ಲಿ ಈ ಪ್ರಶಸ್ತಿ ಪಡೆದ ಪ್ರಪ್ರಥಮ ನೌಕರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಇವರು ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪರವರ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏನಾಗಿತ್ತು?:
ಕಳೆದ ವರ್ಷ ಸೆಷ್ಟಂಬರ್ 29 ರಂದು ಗಣೇಶ ಹಬ್ಬದಂದು ಸಂಜೆಯ ವೇಳೆ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪನವರ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಆ ಕಾರನ್ನು ಆರ್. ಶಿವಕುಮಾರ್ ಚಾಲನೆ ಮಾಡುತ್ತಿದ್ದರು. ಸಂಜೆ 7 ಗಂಟೆ ಸುಮಾರಿಗೆ ಶಿಕಾರಿಪುರ ತಾಲೂಕಿನ ಚಿಕ್ಕ ಜೋಗಿಹಳ್ಳಿ ಗ್ರಾಮದ ಸಮೀಪ ತುಂಬಿ ಹರಿಯುತ್ತಿದ್ದ ಕೆರೆಯ ಕೋಡಿ ನೀರಿನಲ್ಲಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿಬಿದ್ದು, ನೀರಿನ ರಭಸದಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಬಿ.ಎಸ್. ಯಡಿಯೂರಪ್ಪರವರು ಕಾರಿನಲ್ಲಿದ್ದ ಚಾಲಕ ಆರ್.ಶಿವಕುಮಾರ್ ಹಾಗೂ ಅವರ ಬೆಂಗಾವಲು ಪಡೆಯವರಿಗೆ ಕಾರಿನಲ್ಲಿದ್ದವರ ರಕ್ಷಣೆ ಮಾಡು ವಂತೆ ಸೂಚಿಸಿದ್ದರು. ಕ್ಷಣಮಾತ್ರದಲ್ಲಿ ಶಿವಕುಮಾರ್ ನೀರಿಗೆ ಜಿಗಿದು ಕಾರಿನ ಬಾಗಿಲು ತೆರೆದು ಅದರಲ್ಲಿದ್ದ ಆರು ಜನ ಹಾಗೂ ಎರಡೂವರೆ ವರ್ಷದ ಮಗುವನ್ನು ಹಗ್ಗವೊಂದರ ಸಹಾಯದಿಂದ ರಕ್ಷಿಸುವಲ್ಲಿ ಸಫಲರಾಗಿದ್ದರು. ಗಾಯಾಳುಗಳನ್ನು ಬಿ.ಎಸ್. ಯಡಿಯೂರಪ್ಪರವರೇ ಸ್ವತಃ ತಮ್ಮ ಕಾರಿನಲ್ಲಿ ಶಿಕಾರಿಪುರದ ಸರಕಾರಿ ಆಸ್ಪತ್ರೆಗೆ ಕರೆದೊ ಯ್ದಿದರು. ಕಾರಿನಲ್ಲಿದ್ದವರೆಲ್ಲ ದಾವಣಗೆರೆ ಮೂಲದ ವರಾಗಿದು
್ದ, ಒಂದೇ ಕುಟುಂಬದ ಸದಸ್ಯರಾಗಿದ್ದರು. ಗಣೇಶ ಹಬ್ಬದಲ್ಲಿ ಭಾಗಿಯಾಗಲು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿರುವ ಸಂಬಂಧಿಯೋರ್ವರ ಮನೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕೆರೆಗೆ ಕಾರು ಪಲ್ಟಿಯಾಗಿತ್ತು. ಸಾಹಸ: ಆರ್.ಶಿವಕುಮಾರ್‌ರವರು ತಮ್ಮ ಜೀವದ ಹಂಗು ತೊರೆದು ನೀರಿಗೆ ಧುಮುಕಿ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವು ಸಂಘ ಸಂಸ್ಥೆಗಳು ಅವರ ಈ ಸಾಹಸ ಕಾರ್ಯವನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದ್ದವು. ಈ ನಡುವೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಅವರ ಹೆಸರನ್ನು ‘ಉತ್ತಮ ಜೀವನ್ ರಕ್ಷಾ ಪದಕ’ಕ್ಕೆ ಶಿಫಾರಸು ಮಾಡಿತ್ತು.
ನಾಗರಿಕರ ಜೀವ ರಕ್ಷಿಸುವವರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ:
‘ಜೀವನ್ ರಕ್ಷಾ ಪದಕ‘ ಪ್ರಶಸ್ತಿಯು ನಾಗರಿಕರ ಜೀವ ಉಳಿಸುವ ಸಾಹಸ ಕಾರ್ಯದಲ್ಲಿ ಭಾಗಿಯಾದ ಸೈನಿಕರು, ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ, ಸರಕಾರಿ ನೌಕರರು ಹಾಗೂ ಇತರ ವರ್ಗದವರಿಗೆ ಕೇಂದ್ರ ಸರಕಾರ ನೀಡುವ ಪ್ರಶಸ್ತಿಯಾಗಿದೆ. ನಾಗರಿಕರ ಜೀವಕ್ಕೆ ಕುತ್ತು ಬರುವ ಸನ್ನಿವೇಶದಲ್ಲಿ ಅವರ ಜೀವ ರಕ್ಷಣೆ ಮಾಡುವ ಸರಕಾರಿ ಸೇವೆಯಲ್ಲಿರುವವರ ಶೌರ್ಯ ಮೆಚ್ಚಿ ಪ್ರತಿ ವರ್ಷ ಕೇಂದ್ರ ಸರಕಾರ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ.
ಇದರಲ್ಲಿ ಮೂರು ವಿಭಾಗಗಳಿದ್ದು ಸಾಹಸಗಾಥೆಗೆ ಅನುಗುಣವಾಗಿ ‘ಸರ್ವೋತ್ತಮ ಜೀವನ್ ರಕ್ಷಾ ಪದಕ’, ‘ಉತ್ತಮ್ ಜೀವನ್ ರಕ್ಷಾ ಪದಕ’ ಹಾಗೂ ‘ಜೀವನ್ ರಕ್ಷಾ ಪದಕ’ ಪ್ರಶಸ್ತಿಗಲನ್ನು ಕ್ರಮವಾಗಿ ನೀಡಲಾಗುತ್ತದೆ. 2015 ನೆ ಸಾಲಿನಲ್ಲಿ ‘ಸರ್ವೋತ್ತಮ ಜೀವನ್ ರಕ್ಷಾ ಪದಕ’ ಕ್ಕೆ ಈರ್ವರು, ‘ಉತ್ತಮ್ ಜೀವನ ರಕ್ಷಾ ಪದಕ’ಕ್ಕೆ (ರಾಜ್ಯದ ಆರ್.ಶಿವಕುಮಾರ್ ಸೇರಿದಂತೆ) 9 ಹಾಗೂ ‘ಜೀವನ್ ರಕ್ಷಾ ಪದಕ’ಕ್ಕೆ ವಿವಿಧ ರಾಜ್ಯಗಳ 39 ಜನರು ಆಯ್ಕೆಯಾಗಿದ್ದಾರೆ.









