ಪೊಲೀಸ್ ಕ್ರೌರ್ಯದ ಹಿಂದಿರುವವರು ಯಾರು?

ಶಾಸಕಾಂಗ ನಮ್ಮದೇ ಇರಬಹುದು, ಆದರೆ ಕಾರ್ಯಾಂಗದಲ್ಲಿದ್ದವರು ಈ ದೇಶದ ಪ್ರಜಾಸತ್ತೆಯ ಮೇಲೆ ನಂಬಿಕೆಯಿಟ್ಟಿರದೇ ಇದ್ದರೆ ಅದರ ಪರಿಣಾಮ ಏನಾಗಬಹುದು ಎನ್ನುವುದನ್ನು ನಾವು ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ನೋಡಿದ್ದೇವೆ. ಅನೇಕ ಸಂದರ್ಭಗಳಲ್ಲಿ ಆಳ್ವಿಕೆ ನಡೆಸುವವನು ಒಳ್ಳೆಯ ಆಡಳಿತವನ್ನು ನೀಡುವ ಉತ್ಸಾಹದಲ್ಲಿದ್ದರೂ, ಅದನ್ನು ಜನರಿಗೆ ತಲುಪಿಸದಂತೆ ನೋಡಿಕೊಳ್ಳುವ ಕೆಲಸವನ್ನು ಅಧಿಕಾರಿ ವರ್ಗ ಮಾಡುವ ಸಾಧ್ಯತೆಗಳಿವೆ. ಅಂದರೆ ಕಾರ್ಯಾಂಗ ಸಹಕರಿಸದೇ ಇದ್ದರೆ ಶಾಸಕಾಂಗ ತನ್ನ ಉದ್ದೇಶವನ್ನು ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯವಿಲ್ಲ. ದಿಲ್ಲಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಪ್ರಜಾಸತ್ತಾತ್ಮಕವಾಗಿ ಅಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದೆಯಾದರೂ, ಪೊಲೀಸ್ ವ್ಯವಸ್ಥೆ ಸರಕಾರಕ್ಕೆ ಸಹಕರಿಸುವುದಕ್ಕೆ ಸಿದ್ಧವಿಲ್ಲ. ಸರಕಾರಕ್ಕೆ ಎಷ್ಟೆಲ್ಲ ತೊಡಕುಗಳನ್ನು ಮಾಡಲು ಸಾಧ್ಯವೋ ಅದನ್ನೆಲ್ಲ ಅಲ್ಲಿನ ಪೊಲೀಸರು ಮಾಡುತ್ತಿದ್ದಾರೆ. ಪೊಲೀಸರು ಪ್ರತಿಸರಕಾರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿರುವಾಗ, ಪ್ರಜಾಸತ್ತಾತ್ಮಕವಾದ ಸರಕಾರ ಇದ್ದರೂ ಏನು ಪ್ರಯೋಜನ?
ಇಂದು ಪ್ರಜಾಸತ್ತಾತ್ಮಕ ದಾರಿಯಲ್ಲಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲದ ಜನರು ಅಡ್ಡದಾರಿಯಲ್ಲಿ ತಮ್ಮ ಗುರಿಯೆಡೆಗೆ ಸಾಗಲು ಹವಣಿಸುತ್ತಿದ್ದಾರೆ. ಅಧಿಕಾರಿಗಳನ್ನು, ಪೊಲೀಸರನ್ನು ಬಳಸಿಕೊಂಡು ಸರಕಾರವನ್ನು ತಪ್ಪುದಾರಿಯೆಡೆಗೆ ಒಯ್ಯುವ ಯತ್ನವನ್ನು ಇವರು ಮಾಡುತ್ತಿದ್ದಾರೆ. ಅಧಿಕಾರಿಗಳು ಸರಕಾರದ ಅಧೀನದಲ್ಲಿ ಕೆಲಸ ಮಾಡುತ್ತಾರಾದರೂ, ವೈಯಕ್ತಿಕವಾಗಿ ಕೆಲವು ರಾಜಕೀಯ ಅಜೆಂಡಾಗಳನ್ನು ಹೊಂದಿರುವವರು ಸರಕಾರದ ವಿರುದ್ಧ ಒಳಗೊಳಗೆ ಕೆಲಸ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಉತ್ತರ ಪ್ರದೇಶ, ದಿಲ್ಲಿಯಂತಹ ರಾಜ್ಯಗಳಲ್ಲಿ ಜಾತ್ಯತೀತ ಸರಕಾರ ಅಸ್ತಿತ್ವಕ್ಕೆ ಬಂದರೂ ಕೋಮುವಾದಿ, ಜಾತೀಯವಾದಿ ಶಕ್ತಿಗಳನ್ನು ಮಟ್ಟ ಹಾಕುವಲ್ಲಿ ವಿಫಲರಾಗುತ್ತಿವೆ. ಇಂದು ಕರ್ನಾಟಕದಲ್ಲೂ ನಡೆಯುತ್ತಿರುವುದು ಇದೇ ಆಗಿದೆ. ವರ್ಷದ ಹಿಂದೆ ಟಿವಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಕರಾವಳಿಯ ಸಂಘಪರಿವಾರದ ಮುಖಂಡರು ‘‘ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶೇ. 60ಕ್ಕಿಂತ ಅಧಿಕ ಹುಡುಗರು ಸಂಘಪರಿವಾರದಿಂದ ಬಂದವರಾಗಿದ್ದಾರೆ... ಎಲ್ಲ ಕಡೆ ನಮ್ಮ ಹುಡುಗರಿದ್ದಾರೆ’’ ಎಂದು ಒಪ್ಪಿಕೊಂಡಿದ್ದರು. ಇವರೆಲ್ಲ ತಳಸ್ತರದ ಪೊಲೀಸ್ ಹುದ್ದೆಗಳಲ್ಲೇ ಆವರಿಸಿಕೊಂಡಿದ್ದಾರೆ. ಈ ಪೈಕಿ ಹಿಂದುಳಿದ ಜಾತಿಗಳಿಗೆ ಸೇರಿದವರು ಇರುವರಾದರೂ ಅವರೂ ಆರೆಸ್ಸೆಸ್‌ನ ಶಾಖೆಗಳಲ್ಲಿ ತರಬೇತಿ ಪಡೆದವರು. ಆದುದರಿಂದಲೇ ಯಾವ ಸರಕಾರ ಬಂದರೂ ಕರಾವಳಿಯಲ್ಲಿ ಸಂಘಪರಿವಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಅನೈತಿಕ ಪೊಲೀಸ್‌ಗಿರಿ, ಗೂಂಡಾಗಿರಿಗಳನ್ನು ತಡೆಯಲು ಸರಕಾರ ವಿಫಲವಾಗುವುದಕ್ಕೂ ಇದೇ ಕಾರಣ. ಯಾವುದೇ ಘಟನೆಗಳ ಕುರಿತಂತೆ ತಪ್ಪು ಮಾಹಿತಿಗಳನ್ನು ನೀಡಿ ಮೇಲಾಧಿಕಾರಿಗಳನ್ನು ದಾರಿ ತಪ್ಪಿಸುವಲ್ಲಿ ಇವರು ಮುಂಚೂಣಿಯಲ್ಲಿರುತ್ತಾರೆ. ಸಂಘಪರಿವಾರದವರು ಎಲ್ಲಿ, ಯಾವಾಗ ಅಕ್ರಮ ನಡೆಸುತ್ತಾರೆ ಎನ್ನುವ ಮಾಹಿತಿ ಇವರಿಗೆ ಮೊದಲೇ ಇರುತ್ತದೆ. ಎಲ್ಲ ನಡೆದ ಬಳಿಕವೇ ಇವರು ಆ ಸ್ಥಳಕ್ಕೆ ತಲುಪುತ್ತಾರೆ. ಗೋ ಸಾಗಾಟದ ಹೆಸರಿನಲ್ಲಿ ಅಮಾಯಕರ ಮೇಲೆ ಬರ್ಬರ ಹಲ್ಲೆ, ದರೋಡೆಗಳು ನಡೆದರೂ ದುಷ್ಕರ್ಮಿಗಳ ಮೇಲೆ ದೂರು ದಾಖಲಿಸದೇ, ಹಲ್ಲೆಗೀಡಾದವರ ಮೇಲೆ ದೂರು ದಾಖಲಿಸುವಲ್ಲೂ ಈ ಸಂಘಪರಿವಾರದ ಹಿನ್ನೆಲೆಯಿರುವ ಪೊಲೀಸರ ಪಾತ್ರ ಬಹುದೊಡ್ಡದಿದೆ. ಸರಕಾರದ, ಜನರ ತೆರಿಗೆಯ ಅನ್ನ ತಿಂದರೂ, ಇವರು ಕಾರ್ಯನಿರ್ವಹಿಸುವುದು ಶಾಖೆಗಳ ಮುಖಂಡರ ಬೆರಳ ಸನ್ನೆಯ ಮೇರೆಗೆ. ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಪೊಲೀಸರೇ ಮುಖ್ಯ ಪಾತ್ರ ವಹಿಸುತ್ತಿರುವುದನ್ನು ನಾವು ಗಮನಿಸಬೇಕಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಲವು ವಿಷಯಗಳಲ್ಲಿ ಎಡವಿರಬಹುದು. ಆದರೆ ಯಾವತ್ತೂ ಜನಪರವಾಗಿ ಯೋಚಿಸಿ ಅದನ್ನು ಕಾರ್ಯಾಚರಣೆಗೆ ತರಲು ಹವಣಿಸಿದವರು.
ಈ ಹಿಂದಿನ ಎಸ್.ಎಂ. ಕೃಷ್ಣ, ಯಡಿಯೂರಪ್ಪ, ಕುಮಾರಸ್ವಾಮಿ ಮೊದಲಾದ ಮುಖ್ಯಮಂತ್ರಿಗಳಿಗಿಂತ ಅತ್ಯುತ್ತಮವಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಳಸ್ತರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವವರು ಸಿದ್ದರಾಮಯ್ಯ. ಇಂದು ವಿರೋಧ ಪಕ್ಷ ಮತ್ತು ಸಂಘಪರಿವಾರ ಅವರ ಕಾರ್ಯಚಟುವಟಿಕೆಯ ಮುಂದೆ ಅದೆಷ್ಟು ಅಸಹಾಯಕವಾಗಿದೆ ಎಂದರೆ, ಅಧಿಕಾರಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಮುಂದಿಟ್ಟು ಸರಕಾರವನ್ನು ಅಲ್ಲಾಡಿಸಲು ಯತ್ನಿಸುತ್ತಿವೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಸರಕಾರವನ್ನು ಹೇಗಾದರೂ ಸಂಕಟದಲ್ಲಿ ಸಿಲುಕಿಸಬೇಕು ಎಂಬ ಉದ್ದೇಶದಿಂದ ಅದು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ರಾಜ್ಯದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಪೊಲೀಸರು ಪ್ರತಿಭಟನೆ ನಡೆಸುವಂತಹ ವಾತಾವರಣ ನಿರ್ಮಾಣವಾಗಿರುವುದರ ಹಿಂದೆ ಸಂಘಪರಿವಾರದ ಕಾಣದ ಕೈಗಳು ಕೆಲಸ ಮಾಡಿವೆ. ಸಂಘಪರಿವಾರ ತನ್ನ ಜನಗಳ ಮೂಲಕ ಪೊಲೀಸ್ ಇಲಾಖೆಯಲ್ಲಿ ಬಿರುಕನ್ನು ಸೃಷ್ಟಿಸುತ್ತಿದೆ ಮತ್ತು ತನ್ನವರ ಮೇಲೆ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡರೆ, ಅದನ್ನು ‘ಒತ್ತಡ, ಮಾನಸಿಕ ಹಿಂಸೆ’ ಎಂದು ಅವರ ಕೈಗಳನ್ನು ಕಟ್ಟಿ ಹಾಕಲು ಹವಣಿಸುತ್ತಿದೆ. ಡಿವೈಎಸ್ಪಿ ಗಣಪತಿಯ ಪ್ರಕರಣವನ್ನೇ ತೆಗೆದುಕೊಳ್ಳಿ. ಸಂಘಪರಿವಾರದ ಕಟ್ಟಾಳುವಾಗಿ ಕರಾವಳಿಯಲ್ಲಿ ಕೆಲಸ ಮಾಡಿದ್ದ ಅವರು ತನ್ನ ಕೆಲಸದ ಅವಧಿಯಲ್ಲಿ ಮಾಡಿದ ವಿಶೇಷ ಸಾಧನೆಗಳೇನೂ ಇಲ್ಲ. ಬದಲಿಗೆ ಹಲವು ಅಕ್ರಮಗಳಲ್ಲಿ ಸಾಕ್ಷ ಸಹಿತ ಸಿಲುಕಿ ಅಮಾನತುಗೊಂಡಿದ್ದರು. ಸ್ವತಃ ಬಿಜೆಪಿ ಅಧಿಕಾರದಲ್ಲಿರುವಾಗಲೇ ಒಂದು ಬಾರಿ ಅಮಾನತಾಗಿದ್ದರು. ಒಬ್ಬ ಭ್ರಷ್ಟ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವುದು ಒತ್ತಡ ಆಗಿದ್ದರೆ, ನಾಳೆ ಯಾವ ಭ್ರಷ್ಟ ಅಧಿಕಾರಿಯ ವಿರುದ್ಧವೂ ಸರಕಾರ ಕ್ರಮ ಕೈಗೊಳ್ಳುವಂತಿಲ್ಲ. ಪೊಲೀಸರು ಯಾರೂ ಪ್ರಶ್ನಿಸದ ಸರ್ವಾಧಿಕಾರಿಗಳಾಗುತ್ತಾರೆ. ಮತ್ತು ಆಗಿದ್ದಾರೆ ಕೂಡ. ಅದೀಗ ಮಹಾದಾಯಿ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಈ ಹಿಂದೆ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಗಾಗಿ ಒತ್ತಾಯಿಸಿ ದಲಿತರು ಬೀದಿಗಿಳಿದಾಗ ಪೊಲೀಸರು ರಾಕ್ಷಸರಂತೆ ವರ್ತಿಸಿದರು. ಅನಗತ್ಯವಾಗಿ ಯದ್ವಾತದ್ವಾ ಲಾಠಿ ಬೀಸಿದರು. ಮಹಾದಾಯಿ ಪ್ರಕರಣದಲ್ಲೂ ಇದೇ ಸಂಭವಿಸಿತು. ವೃದ್ಧ ಮಹಿಳೆಯರ ಮೇಲೆ ಯಾವ ಕಾರಣಕ್ಕೆ ಪೊಲೀಸರು ಲಾಠಿ ಬೀಸಿದರು? ಅವರಿಗೆ ಈ ರೀತಿ ವರ್ತಿಸಲು ನಿರ್ದೇಶನ ನೀಡಿದವರು ಯಾರು? ಅಥವಾ ಕೇಂದ್ರ ಸರಕಾರ ಅದರಲ್ಲೂ ಮೋದಿ ಸರಕಾರದ ವಿರುದ್ಧ ಜನರು ಪ್ರತಿಭಟನೆ ಮಾಡಿರುವುದು ಪೊಲೀಸರಿಗೆ ಸಹಿಸಲು ಅಸಾಧ್ಯವಾಯಿತೇ? ರಾಜ್ಯ ಸರಕಾರಕ್ಕೆ ಮುಜುಗರ ಮಾಡಲೆಂದೇ ಅವರು ತಮ್ಮ ಕ್ರೌರ್ಯಗಳನ್ನು ಮೆರೆದರೇ? ವಿಪರ್ಯಾಸವೆಂದರೆ, ಗಣಪತಿ ವಿರುದ್ಧ ಕ್ರಮ ತೆಗೆದುಕೊಂಡು ಅವರ ಆತ್ಮಹತ್ಯೆಗೆ ಸರಕಾರ ಕಾರಣವಾಯಿತು ಎಂದು ಆರೋಪಿಸಿ ಬೀದಿಗಿಳಿದು ಜನಜೀವನ ಅಸ್ತವ್ಯಸ್ತಗೊಳಿಸಿದ ಸಂಘಪರಿವಾರ, ಇದೀಗ ಪೊಲೀಸರು ಅಕ್ರಮ ಎಸಗಿದ್ದಾರೆ ಎಂದು ಸರಕಾರದ ತಲೆಗೆ ಕಟ್ಟಲು ಹೊರಟಿದೆ. ಒಂದೆಡೆ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳದಂತಹ ವಾತಾವರಣವನ್ನು ನಿರ್ಮಿಸುವುದು, ಮಗದೊಂದೆಡೆ ಪೊಲೀಸರಿಂದ ದೌರ್ಜನ್ಯಗಳಾಯಿತು ಎಂದು ಮೊಸಳೆ ಕಣ್ಣೀರು ಸುರಿಸುವುದು. ಸದ್ಯಕ್ಕೆ ಇದು ಸಂಘಪರಿವಾರ ಆಡುತ್ತಿರುವ ಅಪಾಯಕಾರಿ ಆಟವಾಗಿದೆ. ಆದ್ದರಿಂದಲೇ ಮಹಾದಾಯಿ ಪ್ರಕರಣದಲ್ಲಿ ಪೊಲೀಸರ ಕ್ರೌರ್ಯದ ಹಿಂದೆ ಯಾರ್ಯಾರೆಲ್ಲ ಇದ್ದಾರೆ ಎನ್ನುವುದನ್ನು ಗುರುತಿಸಿ ಅವರನ್ನು ಶಿಕ್ಷಿಸಬೇಕಾದ ಹೊಣೆಗಾರಿಕೆ ರಾಜ್ಯ ಸರಕಾರಕ್ಕೆ ಸೇರಿದೆ. ಪೊಲೀಸರು ಸರಕಾರದ ನಿರ್ದೇಶನದ ಮೇರೆಗೆ ಲಾಠಿ ಬೀಸಿದರೋ, ಅಥವಾ ಕೇಂದ್ರ ಸರಕಾರದ ಅಗೋಚರ ವ್ಯಕ್ತಿಗಳ ನಿರ್ದೇಶನದಂತೆ ಲಾಠಿ ಬೀಸಿದರೋ ಎನ್ನುವುದು ಬೆಳಕಿಗೆ ಬರುವುದು ಪ್ರಜಾಸತ್ತೆಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ.







