ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಬನ್ನಿ: ನರಸಿಂಗ್‌ಗೆ ಸುಶೀಲ್ ಕರೆ
ಹೊಸದಿಲ್ಲಿ, ಆ.1: ನರಸಿಂಗ್ ಯಾದವ್ ವಿರುದ್ಧದ ಡೋಪಿಂಗ್ ಪ್ರಕರಣದ ಬಗ್ಗೆ ನಾಡಾ ನೀಡಿರುವ ತೀರ್ಪನ್ನು ಡಬಲ್ ಒಲಿಂಪಿಯನ್ ಸುಶೀಲ್ ಕುಮಾರ್ ಸ್ವಾಗತಿಸಿದ್ದಾರೆ. ನಾಡಾದ ಈ ತೀರ್ಪು ನರಸಿಂಗ್‌ಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.
ಒಲಿಂಪಿಕ್ಸ್‌ನಲ್ಲಿ 74 ಕೆಜಿ ವಿಭಾಗದಲ್ಲಿ ಭಾರತವನ್ನು ಯಾರು ಪ್ರತಿನಿಧಿಸಬೇಕೆಂಬ ಬಗ್ಗೆ ಸುಶೀಲ್ ಹಾಗೂ ನರಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನರಸಿಂಗ್ ಕೋಟಾ ಸ್ಥಾನವನ್ನು ಗೆದ್ದುಕೊಂಡಾಗ ಸುಶೀಲ್ ಟ್ರಯಲ್ ನಡೆಸಬೇಕೆಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ನರಸಿಂಗ್ ಮೇಲುಗೈ ಸಾಧಿಸಿದ್ದರು.
‘‘ಬಹುತ್ ಖುಷಿ ಕಿ ಬಾತ್ ಹೈ. ಮೇರಾ ಸಪೋರ್ಟ್ ಪಹಲೇ ಭೀ ಥಾ, ಆಜ್ ಭಿ ಹೈ, ಔರ್ ಕಲ್ ಭಿ ರಹೇಗ(ಇದೊಂದು ಸಂತೋಷದ ಸುದ್ದಿ. ನನ್ನ ಬೆಂಬಲ ಈ ಹಿಂದೆಯೂ ಇತ್ತು. ಇವತ್ತಿಗೂ ಇದೆ. ನಾಳೆಯೂ ಇರಲಿದೆ). ಒಲಿಂಪಿಕ್ಸ್‌ಗೆ ತೆರಳಿ. ದೇಶಕ್ಕೆ ಪದಕ ಗೆದ್ದುಕೊಂಡು ಬಾ’’ ಎಂದು ಸುಶೀಲ್ ಟ್ವಿಟ್ ಮಾಡಿದ್ದಾರೆ.
‘‘ಕುಸ್ತಿಪಟುಗಳು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬೀಳುವುದು ದುರದೃಷ್ಟಕರ. ನಾನು ಕುಸ್ತಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವೆ. ನಾನು ಯಾವಾಗಲೂ ಸಹ ಕುಸ್ತಿಪಟುಗಳಿಗೆ ಬೆಂಬಲ ನೀಡುತ್ತಾ ಬಂದಿರುವೆ’’ ಎಂದು ಸುಶೀಲ್ ಹೇಳಿದ್ದಾರೆ.







