ಬೈಕ್‌ಗೆ ಕಾರು ಢಿಕ್ಕಿ: ಓರ್ವ ಸಾವು
ಪಡುಬಿದ್ರೆ, ಆ.1: ಬೈಕ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ ಮೃತರನ್ನು ಕಾಟಿಪಳ್ಳ ನಿವಾಸಿ ಅಬ್ದುಲ್ ಖಯ್ಯೂಂ(28) ಎಂದು ಗುರುತಿಸಲಾಗಿದೆ. ಇವರು ತನ್ನ ಎನ್‌ಫೀಲ್ಡ್ ಬುಲೆಟ್‌ನಲ್ಲಿ ಸಂಚರಿಸುತಿದ್ದಾಗ ಮುಲ್ಕಿ ಕಡೆಯಿಂದ ಬಂದ ಬಿಎಂಡಬ್ಲ್ಯೂ ಕಾರು ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬೆಳಗ್ಗೆ ಮೃತಪಟ್ಟರು. ಅವಿವಾಹಿತರಾಗಿದ್ದ ಇವರು ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಅಲ್ಲಿ ಕಂಪೆನಿಯೊಂದರಲ್ಲಿ ನೌಕರನಾಗಿದ್ದರು. ಒಂದೂವರೆ ತಿಂಗಳ ರಜೆಯಲ್ಲಿ ಬಂದಿದ್ದ ಇವರು ಹೆಜಮಾಡಿಯ ದಕ್ಷಿಣ ಸುಲ್ತಾನ್ ರಸ್ತೆಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದರು. ಈ ವೇಳೆ ಮುಲ್ಕಿಯತ್ತ ತೆರಳುವಾಗ ಈ ಘಟನೆ ನಡೆದಿದೆ. ಕುಟುಂಬಕ್ಕೆ ಆಸರೆಯಾಗಿದ್ದ ಇವರನ್ನು ಕಳೆದುಕೊಂಡ ಕುಟುಂಬಸ್ಥರ ಸ್ಥಿತಿ ಚಿಂತಾಜನಕವಾಗಿದೆ. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





