ಬಂಗಾರದ ಬೇಟೆಗೆ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸಿದ್ಧತೆ

ಹೊಸದಿಲ್ಲಿ, ಆ.1: ಭಾರತದ ಯುವ ಅಥ್ಲೀಟ್ ದೀಪಿಕಾ ಕುಮಾರಿ ಆರ್ಚರಿಯ ಸ್ಟಾರ್ ಆಟಗಾರ್ತಿಯಾಗಿದ್ದಾರೆ. ಕೇವಲ 22ರ ಹರೆಯದಲ್ಲೇ ಭಾರೀ ಯಶಸ್ಸು ಸಾಧಿಸಿ ಗಮನ ಸೆಳೆದಿದ್ದಾರೆ.
ದೀಪಿಕಾ ಒಲಿಂಪಿಕ್ಸ್‌ಗೆ ಮೊದಲು ಉತ್ತಮ ಪ್ರದರ್ಶನ ನೀಡುವುದು ವಾಡಿಕೆ. 2012ರ ಲಂಡನ್ ಒಲಿಂಪಿಕ್ಸ್‌ಗೆ ಮೊದಲು ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿದ್ದರು.
ಈ ಬಾರಿಯ ಒಲಿಂಪಿಕ್ಸ್‌ಗೆ ಸರಿಯಾಗಿ 100 ದಿನಗಳು ಬಾಕಿ ಇರುವಾಗ ಶಾಂೈನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಮಹಿಳೆಯರ ರಿಕರ್ವ್ ಸ್ಪರ್ಧೆಯಲ್ಲಿ 720ಕ್ಕೆ 686 ಅಂಕ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ನಂ.1 ಆರ್ಚರಿ ಆಗಿ ಕಣಕ್ಕಿಳಿದಿದ್ದ ದೀಪಿಕಾ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. ಈ ಬಾರಿ ರಿಯೋ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೋ? ಕಾದುನೋಡಬೇಕು.
ದೀಪಿಕಾರ ಸಮಗ್ರ ಸಾಧನೆ ಪರಿಣಾಮಕಾರಿಯಾಗಿದೆ. 2011 ಹಾಗೂ 2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದರು. 2011, 2012 ಹಾಗೂ 2013ರಲ್ಲಿ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ವೈಯಕ್ತಿಕ ಹಾಗೂ ಟೀಮ್ ರಿಕರ್ವ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. 2010ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು. 2012ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ದೀಪಿಕಾ 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ರಾಂಚಿಯಿಂದ 15 ಕಿ.ಮೀ. ದೂರದ ಸಣ್ಣ ಹಳ್ಳಿಯಿಂದ ವಿಶ್ವ ಮಟ್ಟದ ತನಕ ದೀಪಿಕಾರ ಪಯಣ ಆಕರ್ಷಕವಾಗಿದೆ. ಚಿಕ್ಕವರಿದ್ದಾಗ ಮಾವಿನ ಮರಗಳ ಕಾಯಿಗೆ ಕಲ್ಲು ಹೊಡೆಯುತ್ತಾ ಗುರಿ ಇಡುವ ಅಭ್ಯಾಸವನ್ನು ಆರಂಭಿಸಿದ್ದ ದೀಪಿಕಾ ಸ್ವತಃ ನಿರ್ಮಿಸಿದ ಬಿಲ್ಲು-ಬಾಣಗಳಿಂದ ಅಭ್ಯಾಸ ಮುಂದುವರಿಸಿದರು.
2006ರಲ್ಲಿ ಜೆಮ್ಶೆಡ್‌ಪುರದ ಟಾಟಾ ಆರ್ಚರಿ ಅಕಾಡಮಿಗೆ ಸೇರ್ಪಡೆಯಾದ ಬಳಿಕ ಅವರ ಜೀವನಕ್ಕೆ ಹೊಸ ತಿರುವು ಲಭಿಸಿತು. ಅಕಾಡಮಿಯಲ್ಲಿ ಮೊದಲ ಬಾರಿ ಸೂಕ್ತ ಸಾಧನವನ್ನು ಪಡೆದ ಅವರು ವಿಶ್ವ ಪ್ರಶಸ್ತಿ ಗೆದ್ದುಕೊಳ್ಳುವ ವಿಶ್ವಾಸವನ್ನು ಪಡೆದರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.
ದೀಪಿಕಾ ಈ ಬಾರಿ ಲಂಡನ್ ಒಲಿಂಪಿಕ್ಸ್‌ನ ಕಹಿ ಘಟನೆಯನ್ನು ಮತು ಹೆಚ್ಚು ಅನುಭವಿ ಆಟಗಾರ್ತಿಯಾಗಿ ಸ್ಪರ್ಧೆಗಿಳಿಯಲಿದ್ದಾರೆ. ಭಾರತಕ್ಕೆ ಆರ್ಚರಿಯಲ್ಲಿ ಮೊತ್ತ ಮೊದಲ ಬಾರಿ ಒಲಿಂಪಿಕ್ಸ್ ಪದಕ ಗೆದ್ದುಕೊಡುವ ವಿಶ್ವಾಸ ಮೂಡಿಸಿದ್ದಾರೆ.







