ಔಷಧ ಘನತ್ಯಾಜ್ಯ: ಇಲಾಖೆ ಸ್ಪಷ್ಟನೆ
ಮಂಗಳೂರು, ಆ.1: ಬೆಳ್ತಂಗಡಿ ಅರಣ್ಯ ಇಲಾಖೆಯು ಜನವಸತಿ ಪ್ರದೇಶದ ಸಮೀಪ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧ ತ್ಯಾಜ್ಯ ಎಸೆದಿರುವ ಕುರಿತು ಪ್ರಕಟವಾಗಿರುವ ವರದಿ ಬಗ್ಗೆ ಔಷಧ ನಿಯಂತ್ರಣ ಇಲಾಖೆ ಸ್ಪಷ್ಟನೆ ನೀಡಿದೆ.
ಜುಲೈ 30ರಂದು ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆದಿಶಕ್ತಿ ಎಂಟರ್‌ಪ್ರೈಸಸ್, ಸಂತೆಕಟ್ಟೆ, ಬೆಳ್ತಂಗಡಿ ಸಂಸ್ಥೆಯ ಮಾಲಕ ಸಚಿನ್ ಕುಮಾರ್ ಎಂಬವರನ್ನು ಕರೆಸಿ ವಿಚಾರಿಸಲಾಗಿದೆ. ಸಂಸ್ಥೆಯವರು ನಾಶಪಡಿಸಲು ದಾಸ್ತಾನು ಇಟ್ಟಿದ್ದ ಅವಧಿ ಮೀರಿದ ಔಷಧಗಳನ್ನು ಕೆಲಸಗಾರರು ಸ್ವಚ್ಛಗೊಳಿಸುವ ವೇಳೆ ಜನವಸತಿ ಪ್ರದೇಶದಲ್ಲಿ ಎಸೆದಿರುವುದು ತಿಳಿದು ಬಂದಿದೆ. ಅವರಿಂದ ತಕ್ಷಣವೇ ಘಟನಾ ಸ್ಥಳದಿಂದ ಔಷಧ ತ್ಯಾಜ್ಯವನ್ನು ತೆರವುಗೊಳಿಸಿ, ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಲು ಸೂಚಿಸಿ ಸೂಕ್ತಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಎಲ್ಲಾ ಔಷಧ ವ್ಯಾಪಾರಸ್ಥರಿಗೆ ಅವಧಿ ಮೀರಿದ ಔಷಧಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಎಚ್ಚರಿಸಲಾಗಿದೆ ಎಂದು ಮಂಗಳೂರು ವೃತ್ತ ಸಹಾಯಕ ಔಷಧ ನಿಯಂತ್ರಕರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ.





