ಸಾವಿರಾರು ಭಾರತೀಯರು ಸಂಕಷ್ಟದಲ್ಲಿ
ಕುವೈತ್, ಸೌದಿ ಅರೇಬಿಯ
ರಿಯಾದ್, ಆ. 1: ಸೌದಿ ಅರೇಬಿಯ, ಕುವೈತ್ ಮತ್ತು ಮಧ್ಯಪ್ರಾಚ್ಯದ ಇತರ ದೇಶಗಳಲ್ಲಿರುವ ನೂರಾರು ಕೇರಳಿಗರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಂಬಳ ಮತ್ತು ಇತರ ಸವಲತ್ತುಗಳು ಸಿಗದಿರುವುದು ಹಾಗೂ ಅವರ ಕೆಲಸದ ಪರ್ಮಿಟ್‌ಗಳ ನವೀಕರಣವಾಗದೆ ಇರುವುದು ಅವರ ಸಂಕಷ್ಟಗಳಿಗೆ ಕಾರಣವಾಗಿದೆ.
ಇದಕ್ಕೆ ಒಂದು ದೊಡ್ಡ ಉದಾಹರಣೆ, ನಿರ್ಮಾಣ ದೈತ್ಯ ಸೌದಿ ಬಿನ್‌ಲಾದಿನ್ ಗ್ರೂಪ್. ಈ ಗುಂಪಿನಲ್ಲಿ ಭಾರೀ ಸಂಖ್ಯೆಯ ಭಾರತೀಯರು ಕೆಲಸ ಮಾಡುತ್ತಿದ್ದು, ಅವರಿಗೆ ವೇತನ ಸರಿಯಾಗಿ ಪಾವತಿಯಾಗಿಲ್ಲ. ಮಕ್ಕಾದ ಮಸ್ಜಿದುಲ್ ಹರಂನಲ್ಲಿ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ನಡೆದ ಕ್ರೇನ್ ದುರಂತಕ್ಕೆ ಸೌದಿ ಸರಕಾರವು ಈ ಕಂಪೆನಿಯನ್ನು ಹೊಣೆಯಾಗಿಸಿ, ಯಾವುದೇ ಹೊಸ ಗುತ್ತಿಗೆಗಳನ್ನು ಪಡೆಯುವುದರಿಂದ ಅದನ್ನು ನಿರ್ಬಂಧಿಸಿತು.
ಆ ದುರಂತದಲ್ಲಿ 107 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ನಿರ್ಬಂಧವನ್ನು ಮೇ ತಿಂಗಳಲ್ಲಿ ತೆರವು ಗೊಳಿಸ ಲಾಯಿತಾದರೂ, ಅದಕ್ಕೂ ಮುನ್ನಹತ್ತಾರು ಸಾವಿರ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಂಪೆನಿಯಲ್ಲಿ ಈಗಲೂ ಕೆಲಸದಲ್ಲಿರುವ ಕೆಲಸಗಾರರಿಗೆ ಸಂಬಳ ನೀಡಲಾಗಿಲ್ಲ.
ಕೆಲಸದ ಪರ್ಮಿಟ್‌ಗಳನ್ನು ನವೀಕರಿಸದ ಹಿನ್ನೆಲೆಯಲ್ಲಿ, ಹೆಚ್ಚಿನ ಸಂಖ್ಯೆಯ ಕೇರಳಿಗರು ಸೇರಿದಂತೆ ಸುಮಾರು 10,000 ಭಾರತೀಯರು ಸಂಕಷ್ಟದಲ್ಲಿದ್ದಾರೆ ಎಂದು ಸೌದಿ ಬಿನ್‌ಲಾದಿನ್ ಕಂಪೆನಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಕೇರಳದ ಲತೀಫ್ ಹೇಳುತ್ತಾರೆ.
‘‘ಐದು ತಿಂಗಳುಗಳಿಂದ ನಮಗೆ ಸಂಬಳ ಸಿಕ್ಕಿಲ್ಲ. ಸುಮಾರು 4,500 ಸದಸ್ಯರಿರುವ ಕಾರ್ಮಿಕ ಶಿಬಿರಗಳ ಪರಿಸ್ಥಿತಿ ಕರುಣಾಜನಕವಾಗಿದೆ. ಅಲ್ಲಿ ನೀರು ಮತ್ತು ಆಹಾರವನ್ನು ಪಡೆದುಕೊಳ್ಳುವುದು ಕಠಿಣವಾಗಿದೆ’’ ಎಂದು ಲತೀಫ್ ಹೇಳುತ್ತಾರೆ.
‘‘ಯಾರಾದರೂ ಭಾರತೀಯ ಅಧಿಕಾರಿಗಳು ಇಲ್ಲಿಗೆ ಬಂದು ಇಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಬೇಕೆಂದು ನಾವು ಮನವಿ ಮಾಡುತ್ತೇವೆ’’ ಎಂದರು.







