ವಿವಾದಾಸ್ಪದ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೆ
ಕೌಲಾಲಂಪುರ, ಆ. 1: ಮಲೇಶ್ಯದಲ್ಲಿ ಭದ್ರತೆಗೆ ಸಂಬಂಧಿಸಿದ ನೂತನ ಕಠಿಣ ಶಾಸನವೊಂದು ಸೋಮವಾರ ಜಾರಿಗೆ ಬಂದಿದೆ. ಆದರೆ, ಈ ಸರ್ವಾಧಿಕಾರಿ ಕಾನೂನು ಪ್ರಜಾಸತ್ತೆಗೆ ಬೆದರಿಕೆಯಾಗಿದೆ ಹಾಗೂ ಅದನ್ನು ಪ್ರಧಾನಿಯ ವಿರೋಧಿಗಳ ವಿರುದ್ಧ ಬಳಸಬಹುದಾಗಿದೆ ಎಂದು ಮಸೂದೆಯ ಟೀಕಾಕಾರರು ಹೇಳುತ್ತಾರೆ.
ರಾಷ್ಟ್ರೀಯ ಭದ್ರತಾ ಮಂಡಳಿ ಕಾಯ್ದೆಯನ್ನು ಪ್ರಧಾನಿ ನಜೀಬ್ ರಝಾಕ್‌ರ ಸರಕಾರ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿತ್ತು.
ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಎಸಗಿದ ಆರೋಪವಿದ್ದು, ಅವರು ರಾಜೀನಾಮೆ ನೀಡಬೇಕೆಂಬ ಕೂಗು ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಕೇಳಿಬರುತ್ತಿದೆ. ‘‘ಭದ್ರತಾ ಬೆದರಿಕೆ’’ ಎದುರಾಗಿದೆ ಎಂಬುದಾಗಿ ಸರಕಾರ ಭಾವಿಸುವ ಸ್ಥಳಗಳಲ್ಲಿ ಸೇನಾಡಳಿತವನ್ನು ಘೋಷಿಸಲು ಈ ಕಾನೂನು ಸರಕಾರಕ್ಕೆ ಅಧಿಕಾರಕ್ಕೆ ನೀಡುತ್ತದೆ.
ರಾಜಕೀಯ ಮತ್ತು ಕಾನೂನು ಸವಾಲುಗಳನ್ನು ಎದುರಿಸುವುದಕ್ಕಾಗಿ ನಜೀಬ್ ಮತ್ತು ಅವರ ಸರಕಾರ ಇದು ಹಾಗೂ ಇತ್ತೀಚಿನ ಇತರ ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತಿವೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.





