ನಿದ್ದೆಯಲ್ಲಿಯೂ ಬೆಚಿ್ಚ ಬೀಳಿಸುತ್ತಿರುವ ಪೊಲೀಸರ ಲಾಠಿಗಳು
‘ಪೊಲೀಸರ ದೌರ್ಜನ್ಯ ನೆನೆದು ನಿದ್ದೆ ಮಾಡಲಾಗುತ್ತಿಲ್ಲ'
- ಮಂಜುನಾಥ ಕೆ.
ಬೆಂಗಳೂರು, ಆ.1: ಪೊಲೀಸರು ಎರಡು ವರ್ಷದ ಮಗುವಿನ ಕಪಾಳಕ್ಕೆ ಹೊಡೆಯುವಷ್ಟು ರಾಕ್ಷಸ ಪ್ರವೃತ್ತಿಯನ್ನು ತೋರುತ್ತಾರೆಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಪೊಲೀಸರ ದೌರ್ಜನ್ಯ ಕಾಡುತ್ತಿದ್ದು, ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೌರ್ಜನ್ಯಕ್ಕೆ ಈಡಾಗಿರುವ ಯಮನೂರು ಗ್ರಾಮದ ಎಚ್.ಕೆ.ಲಕ್ಕಣ್ಣ ಕಣ್ಣೀರಿಡುತ್ತಾರೆ.
ಶುಕ್ರವಾರ ಬೆಳಗ್ಗೆ ಯಮನೂರಿನಲ್ಲಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಅವರು, ಬೆಳ್ಳಂಬೆಳಗ್ಗೆಯೇ ಗ್ರಾಮಕ್ಕೆ ನೂರಾರು ಪೊಲೀಸರು ಆಗಮಿಸಿದರು. ದಿಢೀರನೆ ಮನೆಗಳಿಗೆ ನುಗ್ಗಿದ ಅವರು ಏನೊಂದು? ವಿಚಾರಣೆ ಮಾಡದೆ ಮುದುಕರು, ಮಕ್ಕಳೆನ್ನದೆ ಮನಬಂದಂತೆ ಥಳಿಸಿದರು ಎಂದು ಆರೋಪಿಸಿದರು.
ಅವಾಚ್ಯ ಶಬ್ದಗಳಿಂದ ನಿಂದನೆ: ಪೊಲೀಸರು ನಮ್ಮ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಪದಗಳನ್ನು ಹೇಳಲು ಸಾಧ್ಯವಾಗುತ್ತಿಲ್ಲ, ಅಷ್ಟು ಕೆಟ್ಟ ದಾಗಿವೆ. ನಮ್ಮ ಅಕ್ಕ, ತಂಗಿ, ತಾಯಂದಿರನ್ನು ನಿಂದಿ ಸಲು ಪೊಲೀಸರಿಗೇನಿದೆ ಅಧಿಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಬುಗರ್ಭಿಣಿಯ ಮೇಲೆ ಪೊಲೀಸರು ಹಲ್ಲೆ ಮಾಡಿರುವುದು ಎಷ್ಟು ಸರಿ? ಈ ಗರ್ಭಿಣಿ ಯಾವ ಅಂಗಡಿಯ ಮೇಲೆ ಕಲ್ಲು ತೂರಲು ಸಾಧ್ಯ? ಸುಮಾರು 70 ವರ್ಷದ ವೃದ್ಧೆಗೆ ಕೈ ಮುರಿದು ಹೋಗುವ ರೀತಿಯಲ್ಲಿ ಥಳಿಸಿದ್ದಾರೆ. ಈ ಮುದುಕಿ ಯಾವ ಆಫೀಸಿಗೆ ಬೆಂಕಿ ಇಡಲು ಸಾಧ್ಯ? ನಾವೇನು ತಪ್ಪು ಮಾಡಿದ್ದೇವೆಂದು ನಮ್ಮನ್ನು ಸಾಯುವಂತೆ ಥಳಿಸಿದ್ದಾರೆ ಎಂದು ಊರಿನ ಜನತೆ ಪ್ರಶ್ನಿಸುತ್ತಾರೆ. ಅವರಿಗೆ ಉತ್ತರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಎಚ್.ಕೆ.ಲಕ್ಕಣ್ಣ ರೋದಿಸಿದರು.
ಬಂಧಿತರನ್ನು ಬಿಡುಗಡೆ ಮಾಡಿ:
ಉತ್ತರ ಕರ್ನಾ ಟಕ ಭಾಗದ ಜನತೆಯ ಬಾಯಾರಿಕೆಗಾಗಿ, ನೀರಿಗಾಗಿ ನಾವು ಹೋರಾಟ ಮಾಡಿದೆವು. ಆದರೆ, ನಮಗೆ ಸಿಕ್ಕ ಪ್ರತಿಫಲ ಲಾಠಿ ಏಟು ಹಾಗೂ ಬಂಧನ. ಹೋರಾಟ ದಲ್ಲಿ ಭಾಗಿಯಾಗಿಲ್ಲದ, ಅನಾರೋಗ್ಯ ಪೀಡಿತರನ್ನು ಪೊಲೀಸರು ಬಂಧಿಸಿದ್ದಾರೆ. ಕೂಡಲೇ ಹೋರಾಟ ಗಾರರನ್ನು ಹಾಗೂ ಅಮಾಯಕ ಬಂಧಿತರನ್ನು ಬಿಡುಗಡೆಗೊಳಿಸಿ, ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಯಮನೂರಿನಲ್ಲಿ ಗರ್ಭಿಣಿಯರು ವೃದ್ಧರು ಹಾಗೂ ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಪೊಲೀಸರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಗಾಯಗೊಂಡ ರೈತರಿಗೆ, ಮಹಿಳೆಯರಿಗೆ ಸರಕಾರವೇ ಉಚಿತ ಚಿಕಿತ್ಸೆಯನ್ನು ನೀಡಬೇಕು. ಜ್ಯೋತಿ, ಸದಸ್ಯೆ, ರಾಜ್ಯ ಮಹಿಳಾ ಒಕ್ಕೂಟ.







