ಕನ್ನಡಿಗ ಪ್ರಕಾಶ್ ನಂಜಪ್ಪಗೆ ಚಿನ್ನ ಜಯಿಸುವ ಗುರಿ

ರಿಯೋ ಡಿ ಜನೈರೊ, ಆ.1: ಮೂರು ವರ್ಷಗಳ ಹಿಂದೆ ವೃತ್ತಿಜೀವನ ಅಂತ್ಯಗೊಳಿಸಬೇಕಾದ ಪರಿಸ್ಥಿತಿ ಎದುರಿಸಿದ್ದ ಭಾರತೀಯ ಹಿರಿಯ ಶೂಟರ್ ಹಾಗೂ ಕನ್ನಡಿಗ ಪ್ರಕಾಶ್ ನಂಜಪ್ಪ ಆಗಸ್ಟ್ 5 ರಂದು ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಮೇಲೆ ಗುರಿ ಇಡುವ ವಿಶ್ವಾಸದಲ್ಲಿದ್ದಾರೆ.
2013ರಲ್ಲಿ ಸ್ಪೇನ್‌ನ ಗ್ರೆನಡಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಕಾಶ್‌ಗೆ ಪಾರ್ಶ್ವವಾಯು ಪೀಡಿತರಾಗಿದ್ದರು. ಪಾರ್ಶ್ವವಾಯುವಿನಿಂದಾಗಿ ಮುಖದ ಬಲಭಾಗದ ಮಾಂಸಖಂಡದ ಮೇಲೆ ಪರಿಣಾಮಬೀರಿತ್ತು. ಈ ಘಟನೆ ಅವರ ವೃತ್ತಿಜೀವನಕ್ಕೆ ಆಘಾತ ತಂದೊಡ್ಡಿತ್ತು.
‘‘ಶೂಟಿಂಗ್ ಕ್ರೀಡೆ ತ್ಯಜಿಸಬೇಕೆಂದು ವೈದ್ಯರು ಹೇಳಿದಾಗ ನನಗೆ ತುಂಬಾ ಭಯವಾಗಿತ್ತು. ಶೂಟಿಂಗ್ ನಿಲ್ಲಿಸಬೇಕೆಂಬ ವೈದ್ಯರ ಸಲಹಯೇ ನನಗೆ ಉತ್ತೇಜನಕಾರಿ ಎನಿಸಿಸಿತು. ನನಗೆ ಪಾರ್ಶ್ವವಾಯು ಬಡಿದಾಗ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿದೆ. ಆಗ ಮುಖದಲ್ಲಿ ಏನೋ ಆಗಿದೆ ಎಂದು ಗೊತ್ತಾಯಿತು. ಅದೊಂದು ಭಯಾನಕವಾಗಿತ್ತು. ನನ್ನ ಶೂಟಿಂಗ್ ವೃತ್ತಿಜೀವನಕ್ಕೆ ಮಾರಕವಾಗುವಂತೆ ಕಂಡುಬಂದಿತ್ತು’’ ಎಂದು ಹಿಂದಿನ ಘಟನೆಯ ಬಗ್ಗೆ ಪ್ರಕಾಶ್ ಹೇಳಿದ್ದಾರೆ.
ಪ್ರಕಾಶ್ ಆರೇ ತಿಂಗಳಲ್ಲಿ ಚೇತರಿಸಿಕೊಂಡರು. ಕಳೆದ ಎರಡು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡಿರುವ 40ರ ಹರೆಯದ ಪ್ರಕಾಶ್ ರಿಯೋ ಗೇಮ್ಸ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಹಾಗೂ 50 ಮೀ. ಪಿಸ್ತೂಲ್ ಸ್ಪರ್ಧೆಗಳಲ್ಲಿ ಪದಕ ಜಯಿಸಬಲ್ಲ ಭಾರತದ ಓರ್ವ ಫೇವರಿಟ್ ಶೂಟರ್ ಆಗಿ ಭರವಸೆ ಮೂಡಿಸಿದ್ದಾರೆ.
ಪ್ರಕಾಶ್ 2009ರಲ್ಲಿ ಶೂಟಿಂಗ್‌ನ್ನು ಗಂಭೀರವಾಗಿ ತೆಗೆದುಕೊಂಡಿದ್ದರು.
‘‘ಈಗ ನನಗೆ 40 ವರ್ಷ. ಆದರೆ, ಇದೊಂದು ಕೇವಲ ಸಂಖ್ಯೆಯಷ್ಟೇ.ನಾನು ಶೂಟಿಂಗ್ ಸ್ಪರ್ಧೆಗೆ ಇಳಿದಾಗ ವಯಸ್ಸು ಯಾವುದೇ ವ್ಯತ್ಯಾಸ ಉಂಟು ಮಾಡದು ಎಂದು ಪ್ರಕಾಶ್ ಹೇಳಿದ್ದಾರೆ.







