ಆ.5ರಂದು ದಬಕ್ ದಬಾ ಐಸಾ ತೆರೆಗೆ

ಮಂಗಳೂರು, ಆ.2: ಬಿಡುಗಡೆಗೆ ಮುನ್ನವೇ ಸೋರಿಕೆಯಾಗಿ ತುಳು ಚಿತ್ರರಂಗದಲ್ಲಿ ಆತಂಕ ಸೃಷ್ಟಿಸಿರುವ ತುಳು ಚಲನಚಿತ್ರ ‘ದಬಕ್ ದಬಾ ಐಸಾ’ ಆ. 5ರಂದು ಕರಾವಳಿಯಾದ್ಯಂತ ಏಕ ಕಾಲದಲ್ಲಿ ತೆರೆಕಾಣಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಚಿತ್ರದ ನಿರ್ದೇಶಕ ಪ್ರಕಾಶ್ ಪಾಂಡೇಶ್ವರ, ಮಂಗಳೂರಿನಲ್ಲಿ ಸುಚಿತ್ರ, ಬಿಗ್‌ಸಿನೆಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮಣಿಪಾಲದಲ್ಲಿ ಐನಾಕ್ಸ್, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಬಿ.ಸಿ.ರೋಡ್‌ನಲ್ಲಿ ನಕ್ಷತ್ರ ಮೂಡಬಿದ್ರೆಯಲ್ಲಿ ಅಮರಶ್ರೀ ಚಿತ್ರಮಂದಿರದಲ್ಲಿ ತೆರೆಕಾಣಲಿದೆ ಎಂದರು.
ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರ 21 ದಿನಗಳ ಕಾಲ ಒಂದೇ ಹಂತದಲ್ಲಿ ಮಂಗಳೂರು ಸುತ್ತಮುತ್ತ ಹಾಗೂ ಸುರತ್ಕಲ್, ಬೋಂದೆಲ್, ಶಕ್ತಿನಗರದಲ್ಲಿ ಚಿತ್ರೀಕರಣ ನಡೆದಿದೆ. ದಬಕ್ ದಬಾ ಐಸಾ ಚಿತ್ರ ಸಂಪೂರ್ಣ ಹಾಸ್ಯ ಚಿತ್ರವಾಗಿದ್ದು, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶಗಳಿವೆ ಎಂದು ಅವರು ಹೇಳಿದರು.
ಚಿತ್ರದ ನಾಯಕ ನಟ ನವೀನ್ ಡಿ. ಪಡೀಲ್ ಮಾತನಾಡಿ, ದಬಕ್ ದಬಾ ಐಸಾ ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ತುಳು ಚಿತ್ರವನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಖ್ಯಾತ ನಟ ಭೋಜರಾಜ್ ವಾಮಂಜೂರು, ಚಿತ್ರಕ್ಕೆ ಸಂಭಾಷಣೆ ಬರೆದ ಶಶಿರಾಜ್ ಕಾವೂರು, ಸಂಗೀತ ಒದಗಿಸಿದ ರಾಜೇಶ್ ಎಂ. ಉಪಸ್ಥಿತರಿದ್ದರು.





