ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಆಚರಣೆ

ಕಾಸರಗೋಡು, ಆ.2: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಕಾಸರಗೋಡು ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ದಿನವಾದ ಇಂದು ಸಾವಿರಾರು ಭಕ್ತರು ಪೂರ್ವಜರ ಸದ್ಗತಿಗಾಗಿ ಪಿತೃತರ್ಪಣ ಸಲ್ಲಿಸಿದರು.
ಜಿಲ್ಲೆ ಹಾಗೂ ಹೊರಜಿಲ್ಲೆ, ರಾಜ್ಯಗಳಿಂದ ಸಾವಿರಾರು ಮಂದಿ ಪಿತೃ ತರ್ಪಣ ಸಲ್ಲಿಸಿ ದೇವರ ದರ್ಶನ ಪಡೆದರು.
ಮುಂಜಾನೆಯಿಂದಲೇ ಸಾವಿರಾರು ಮಂದಿ ತೃಕ್ಕನ್ನಾಡು ದೇವಸ್ಥಾನಕ್ಕೆ ತಲುಪಿದರು. ಭಕ್ತರು ಮೊದಲು ದೇವಸ್ಥಾನದ ಕೆರೆಯಲ್ಲಿ ಮಿಂದು, ಕ್ಷೇತ್ರದ ಭಂಡಾರಕ್ಕೆ ಕಾಣಿಕೆ ಸಲ್ಲಿಸಿ ಅರ್ಚಕರಿಗೆ ತಾಂಬೂಲ ದಕ್ಷಿಣೆ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಸ್ಥಾನದಿಂದ ನೀಡುವ ಅಕ್ಕಿ, ಪುಷ್ಪಮೊದಲಾದ ಪ್ರಸಾದವನ್ನು ಪಡೆದು ಕುಟುಂಬ ಸದಸ್ಯರೊಂದಿಗೆ ಸಮುದ್ರ ಕಿನಾರೆಗೆ ತೆರಳಿ ಅಲ್ಲಿ ಪುರೋಹಿತರಿಂದ ವಿದ್ಯುಕ್ತ ವಿಧಿ ವಿಧಾನಗಳು ನಡೆದ ಬಳಿಕ ಸಮದ್ರದಲ್ಲಿ ಪಿಂಡ ಬಿಟ್ಟು ಮೂರು ಬಾರಿ ಸಮುದ್ರದಲ್ಲಿ ಮುಳುಗಿ ಮರಳಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರು.
ಅರ್ಚಕ ಬ್ರಹ್ಮಶ್ರೀ ನವೀನ್‌ಚಂದ್ರ ಕಾಯರ್ತಾಯ ಮತ್ತು ಬ್ರಹ್ಮಶ್ರೀ ರಾಜೇಂದ್ರ ಅರಳಿತ್ತಾಯರ ನೇತೃತ್ವದಲ್ಲಿ 25ಕ್ಕೂ ಅಧಿಕ ಪುರೋಹಿತರು ಪಿಂಡ ಸಮರ್ಪಣೆಗೆ ನೇತೃತ್ವ ನೀಡಿದರು.
ಏಳು ಸಾವಿರಕ್ಕೂ ಅಧಿಕ ಮಂದಿ ಪಿತೃ ತರ್ಪಣ ನೆರವೇರಿಸಿದರು.
35 ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ತಲುಪಿದ್ದರು ಮಳೆ ಇಲ್ಲದೆ ಇಲ್ಲದಿದ್ದುದರಿಂದ ಭಕ್ತರಿಗೆ ಅನುಕೂಲವಾಯಿತು.
ಪಿತೃ ತರ್ಪಣಕ್ಕೆ ಬಂದವರಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಪ್ರಸಾದ ವಿತರಣೆಗೆ ಕೌಂಟರ್ ತೆರೆಯಲಾಗಿತ್ತು.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿದ್ದರು.





