‘‘ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳಬೇಡಿ’’
ಜನತೆಗೆ ಪ್ರಧಾನಿ ಮೋದಿ ಮನವಿ

ನವದೆಹಲಿ,ಆ.2 : ವೈದ್ಯರ ಔಷಧಿ ಚೀಟಿ ಇಲ್ಲದೆ ಆ್ಯಂಟಿಬಯೋಟಿಕ್ಸ್ ಔಷಧಿಯನ್ನು ತೆಗೆದುಕೊಳ್ಳಬೇಡಿ, ಎಂದು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮನವಿ ಮಾಡಿದ್ದಾರೆ.
ಕಳೆದ ರವಿವಾರ ತಮ್ಮ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಿದ್ದ ಮೋದಿ ‘‘ಅನಾವಶ್ಯಕವಾಗಿ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳುವ ಅಭ್ಯಾಸ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಕೆಲ ಸಮಯದ ಕಾಲ ಸಮಸ್ಯೆಗೆ ಅದು ಪರಿಹಾರ ನೀಡಬಹುದಾದರೂ ಯಾವತ್ತೂ ವೈದ್ಯರು ಚೀಟಿ ನೀಡದೆ ಇಂತಹ ಔಷಧಿಗಳನ್ನು ತೆಗೆದುಕೊಳ್ಳಬಾರದು’’ ಎಂದ ಮೋದಿ ಆ್ಯಂಟಿಬಯೋಟಿಕ್ಸ್ ತೆಗೆದುಕೊಂಡು ಸ್ವಯಂ ಚಿಕಿತ್ಸೆಗೆ ಮುಂದಾದಲ್ಲಿ ಮುಂದೆ ನಮ್ಮ ದೇಹಕ್ಕೆ ಆ್ಯಂಟಿಬಯೋಟಿಕ್ಸ್ ಗಳಿಂದ ಯಾವುದೇ ಪ್ರಯೋಜನವಾಗದೇ ಇರುವ ಸಂಭವವಿದೆ,’’ಎಂದು ಎಚ್ಚರಿಸಿದರು.
‘‘ಆ್ಯಂಟಿಬಯೋಟಿಕ್ಸ್ ಔಷಧಿಗಳ ಸ್ಟ್ರಿಪ್ ನಲ್ಲಿ ಜನರನ್ನು ಎಚ್ಚರಿಸಲೆಂದೇ ಕೆಂಪು ಗೆರೆಯೊಂದಿದೆ,’’ ಎಂದು ಅವರು ವಿವರಿಸಿದರು.
ಡೆಂಗ್ ಬಗ್ಗೆ ಉಲ್ಲೇಖಿಸಿದ ಮೋದಿ, ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಈ ರೋಗ ಹರಡದಂತೆ ಮಾಡಲು ಅತ್ಯಗತ್ಯ, ಎಂದು ಹೇಳಿದರಲ್ಲದೆ ಈ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಜಾಹೀರಾತುಗಳನ್ನು ಹಾಕಲಾಗುತ್ತಿದ್ದರೂ ಕೆಲವೊಮೆ ಜನರು ಅವುಗಳನ್ನು ನಿರ್ಲಕ್ಷ್ಯಿಸುತ್ತಾರೆ, ಎಂದರು.







