ಮೈಸೂರು ಕೋರ್ಟ್ ಆವರಣದ ಶೌಚಾಲಯದಲ್ಲಿ ಸ್ಫೋಟ ಪ್ರಕರಣ : ಸಾಮ್ಯತೆಯ ತನಿಖೆಗೆ ಕೇರಳದ ಪೊಲೀಸರ ಆಗಮನ

ಮೈಸೂರು, ಆ.2: ಇಲ್ಲಿನ ಕೋರ್ಟ್ ಆವರಣದಲ್ಲಿರುವ ಶೌಚಾಲಯದಲ್ಲಿ ಸೋಮವಾರ ಸಂಜೆ ನಡೆದ ಸ್ಫೋಟ ಪ್ರಕರಣ , ಹಿಂದೆ ಕೇರಳದ ಕೊಲ್ಲಂನಲ್ಲಿ ಸಂಭವಿಸಿದ ಸ್ಫೋಟಕ್ಕೆ ತಾಳೆಯಾಗುತ್ತಿದ್ದು, ಕೇರಳದ ಪೊಲೀಸರು ತನಿಖೆಗೆ ಇಂದು ಮೈಸೂರಿಗೆ ಆಗಮಿಸಿದ್ದಾರೆ.
ಕಳೆದ ಜೂನ್ 15ರಂದು ಕೊಲ್ಲಂ ಕೋರ್ಟ್ ಆವರಣದಲ್ಲೂ ಇದೇ ರೀತಿ ಸ್ಪೋಟ ಸಂಭವಿಸಿತ್ತು.ಕೊಲ್ಲಂ ಎಸಿಪಿ ರೆಕ್ಸ್ ಬಾಬಿ ಅರವಿನ್ ನೇತೃತ್ವದ ಐವರ ತಂಡ ಮೈಸೂರಿಗೆ ಆಗಮಿಸಿದ್ದು, ಎರಡೂ ಕೃತ್ಯದ ಸಾಮ್ಯತೆಯ ಬಗ್ಗೆ ಪೊಲೀಸರು ತಂಡ ಪರಿಶೀಲನೆ ನಡೆಸುತ್ತಿದೆ. ಕೊಲ್ಲಂನ ಪಾರ್ಕ್‌ನಲ್ಲಿದ್ದ ಜೀಪ್‌ನಲ್ಲಿ ಸ್ಟೀಲ್ ಬಾಂಬ್ ಇಟ್ಟಿದ್ದರು. ಬಾಂಬ್ ಸ್ಫೋಟದಿಂದ ಓರ್ವನಿಗೆ ಗಾಯವಾಗಿತ್ತು.
ಮೈಸೂರು ಸ್ಫೋಟ ಪೂರ್ವಯೋಜಿತ ಕೃತ್ಯ ? : ಬೆಳಗಾವಿಯಿಂದ ಮೈಸೂರಿಗೆ ಬರುತ್ತಿದ್ದ ರೈಲಿನಲ್ಲಿ ಸ್ಫೋಟಕ ಹತ್ತು ದಿನಗಳ ಹಿಂದೆ ಬೆಳಗಾವಿಯಲ್ಲಿ ಪತ್ತೆಯಾಗಿತ್ತು ಎಂದು ತಿಳಿದು ಬಂದಿದೆ. ಬೆಳಗಾವಿ ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಬ್ಯಾಗ್ ನಲ್ಲಿದ್ದ ಪೊಟ್ಟಣವೊಂದು ಕೆಳಗೆ ಬಿದ್ದಿತ್ತು. ಬ್ಯಾಗ್ ನಿಂದ ಬಿದ್ದಿದ್ದ ಪೊಟ್ಟಣವನ್ನು ಯೋಧರೊಬ್ಬರು ಪೊಲೀಸರಿಗೆ ತಲುಪಿಸಿದ್ದರು. ರೈಲ್ವೇ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.







