ಹಾಸನ ಪೊಲೀಸರಿಂದ ಭರ್ಜರಿ ಬೇಟೆ: 48 ಲಕ್ಷ ರೂ. ಸಹಿತ ಕೊಲೆ ಆರೋಪಿಗಳು ವಶಕ್ಕೆ
.jpg)
ಹಾಸನ, ಆ.2: ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಿಂದ 48 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಟ್ಟಾವರ ಹೊಸಳ್ಳಿ ಗ್ರಾಮದ ನಿವಾಸಿ ವಸಂತ (35), ಕರವೇ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ತಾಲ್ಲೂಕಿನ ಅಟ್ಟಾವರ ಹೊಸಳ್ಳಿ ಗ್ರಾಮದ ನಿವಾಸಿ ವಿಶ್ವಾಸ್ (26), ಕರವೆ ಉಪಾಧ್ಯಕ್ಷ ನಗರದ ಕೆ.ಆರ್. ಪುರಂ ನಿವಾಸಿ ಮೋಹನ್ (28) ಬಂಧಿತ ಆರೋಪಿಗಳು ಎಂದರು.
ಆರೋಪಿಗಳು ನಿವೃತ್ತ ಅರಣ್ಯಾಧಿಕಾರಿ ಕೆ.ಸಿ.ಚಂಗಪ್ಪ ಅವರ ಪುತ್ರನಿಗೆ ಮೆಡಿಕಲ್ ಸೀಟು ತೆಗೆಸಿಕೊಡುವುದಾಗಿ ಹೇಳಿ ಜು.20ರಂದು 5 ಲಕ್ಷ ರೂ. ಸಹಿತ ಚೆಂಗಪ್ಪರನ್ನು ಕಾರಿನಲ್ಲಿ ಕರೆದೊಯ್ದಿದ್ದರು. ಈ ಸಂದರ್ಭ ಹಗ್ಗದಿಂದ ಚಂಗಪ್ಪರ ಕುತ್ತಿಗೆ ಬಿಗಿದು ಕೊಲೆ ಮಾಡಿ, ಶವವನ್ನು ಆಲೂರು ಬಳಿ ಹೇಮಾವತಿ ನದಿಯ ಹಿನ್ನೀರಿನಲ್ಲಿ ಕಲ್ಲುಕಟ್ಟಿ ಬಿಸಾಡಿದ್ದರು. ಕೆ.ಸಿ.ಚಂಗಪ್ಪರು ಮನೆಗೆ ಬಾರದ ಕುರಿತು ಪುತ್ರ ಮನೋಜ್ ಕುಮಾರ್ ಅನುಮಾನದಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಅಪರ ಅಧೀಕ್ಷಕಿ ಶೋಭಾರಾಣಿ ಮಾರ್ಗದರ್ಶನದಲ್ಲಿ ಹಾಸನ ಉಪ ವಿಭಾಗದ ಉಪಾಧೀಕ್ಷಕ ಜಯರಾಂ, ವೃತ್ತ ನಿರೀಕ್ಷಕ ಸತ್ಯನಾರಾಯಣ, ಆಲೂರು ಆರಕ್ಷಕ ನಿರೀಕ್ಷಕ ವಿಶ್ವನಾಥ್ ಹಾಗೂ ಹಾಸನ ನಗರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಪಿ. ಸುರೇಶ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ಅನುಮಾನದ ಹಿನ್ನೆಲೆಯಲ್ಲಿ ಮೂವರನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಹಿರಂಗೊಂಡಿದೆ ಎಂದರು.
ಪತ್ತೆ ಕಾರ್ಯ ತಂಡದಲ್ಲಿ ಹಾಸನ ನಗರ ಠಾಣೆಯ ಸಿಬ್ಬಂದಿಯಾದೆ ಎಎಸೈ ಪುಟ್ಟಸ್ವಾಮಿ, ಪೀರ್ ಖಾನ್, ಪ್ರಸನ್ನ ಕುಮಾರ್, ನವೀನ್ ಕುಮಾರ್, ಜಮೀಲ್ ಅಹಮ್ಮದ್, ಸೂರಜ್ ಮತ್ತು ಆಲೂರು ಪೊಲೀಸ್ ಠಾಣೆಯ ಪಿಎಸೈ ನಟರಾಜ್, ಮಂಜೇಗೌಡ, ಗುರುಮೂರ್ತಿ, ಮಂಜುನಾಥ ಪತ್ತೆಕಾರ್ಯದಲ್ಲಿ ಸಹಕರಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಅಧೀಕ್ಷಕಿ ಶೋಭಾರಾಣಿ, ಹಾಸನ ಉಪ ವಿಭಾಗದ ಉಪಾಧೀಕ್ಷಕ ಜಯರಾಂ ಉಪಸ್ಥಿತರಿದ್ದರು.







