ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟನೆ

ಮಂಗಳೂರು,ಆ.2: ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ, ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗ, ಯೆನೆಪೊಯ ನರ್ಸಿಂಗ್ ಕಾಲೇಜು, ವೈದ್ಯಕೀಯ ಸಮಾಜ ಕಾರ್ಯ ವಿಭಾಗ ಹಾಗೂ ಆಸ್ಪತ್ರೆಯ ಆಡಳಿತ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ಘಾಟನೆಯು ಸೋಮವಾರ ಆಸ್ಪತ್ರೆಯಲ್ಲಿ ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮುಹಮ್ಮದ್ ಅಮೀನ್ ವಾಣಿ, ಶಿಶುಮರಣ ಹಾಗೂ ರೋಗಗಳನ್ನು ನಿವಾರಿಸುವಲ್ಲಿ ಸ್ತನ್ಯಪಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಎಲ್ಲಾ ತಾಯಂದಿರು ಸ್ತನ್ಯಪಾನದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ರಾಯಭಾರಿಗಳಂತೆ ಶ್ರಮಿಸಬೇಕೆಂದು ಕರೆ ನೀಡಿದರು.
ಯೆನೆಪೊಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಆಶಾ ಶೆಟ್ಟಿ ಮಾತನಾಡಿ, ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ದೇಶ ಹಾಗೂ ಈ ವರ್ಷದ ಮುಖ್ಯ ಸಂದೇಶದ ಬಗ್ಗೆ ವಿವರಿಸಿದರು. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸ್ವಚ್ಛತೆ, ಪೌಷ್ಠಿಕತೆ, ರೋಗ ಪ್ರತಿಬಂಧಕ ಚುಚ್ಚುಮದ್ದು, ಎದೆಹಾಲುಣಿಸುವಿಕೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯೆನೆಪೊಯ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗವು ಮಕ್ಕಳ ವಿಭಾಗ ಹಾಗೂ ಹೆರಿಗೆ ವಿಭಾಗದ ಸಹಭಾಗಿತ್ವದಲ್ಲಿ ರೂಪಿಸಲಾದ ‘ಮದರ್ ಕ್ರಾಫ್ಟ್’ ಸೇವೆಯನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಭಯ ನಿರ್ಗುಡೆ ಈ ಸೇವೆಯ ಬಗ್ಗೆ ವಿವರಿಸಿದರು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಸಲ್ದಾನ, ದಾದಿಯರ ಅಧೀಕ್ಷಕಿ ಭಾನುಮತಿ ಹಾಗೂ ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಾಧವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಮುಹಮ್ಮದ್ ಗುತ್ತಿಗಾರ್ ಸ್ವಾಗತಿಸಿದರು. ಮಕ್ಕಳ ಚಿಕಿತ್ಸಾ ವಿಭಾಗದ ಪ್ರೊ. ಡಾ.ಅನಿತಾ ಪ್ರಭು ವಂದಿಸಿದರು. ವೈದ್ಯಕೀಯ ಸಮಾಜಕಾರ್ಯ ವಿಭಾಗದ ಅಬ್ದುರ್ರಝಾಕ್ ಹಾಗೂ ನುಮಾನ್ ಕಾರ್ಯಕ್ರಮ ಸಂಯೋಜಿಸುವಲ್ಲಿ ಸಹಕರಿಸಿದರು. ಸಪ್ತಾಹದ ಅಂಗವಾಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾಹಿತಿ, ಸಿಬ್ಬಂದಿ ವರ್ಗದವರಿಗೆ ಜಾಗೃತಿ ಹಾಗೂ ಗ್ರಾಮೀಣ ವಿಸ್ತರಣಾ ಕೇಂದ್ರಗಳಲ್ಲಿ ಮಹಿಳೆಯರಿಗೆ ಭಿತ್ತಿಚಿತ್ರ, ಕರಪತ್ರ, ರೂಪಕ ಹಾಗೂ ಉಪನ್ಯಾಸ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.







