ಪ.ಬಂಗಾಳದ ನೂತನ ಹೆಸರು ಗೊತ್ತೇ?
ಕೋಲ್ಕತಾ,ಜು.2: ಪ.ಬಂಗಾಳವು ಶೀಘ್ರದಲ್ಲೇ ಹೊಸ ಹೆಸರನ್ನು ಪಡೆದುಕೊಳ್ಳಲಿದೆ. ಆ ರಾಜ್ಯಕ್ಕೆ ಇಂಗ್ಲೀಷ್‌ನಲ್ಲಿ ಬೆಂಗಾಲ್ ಎಂಬು ದಾಗಿಯೂ, ಬಂಗಾಳಿಯಲ್ಲಿ ‘ಬಂಗ’ಅಥವಾ ‘ಬಾಂಗ್ಲಾ’ ಎಂದೂ ಹೆಸರಿಡುವ ಸಾಧ್ಯತೆಯಿದೆ.
ಪ. ಬಂಗಾ ಪುನರ್‌ನಾಮಕರಣ ಮಾಡುವ ಮಹತ್ವದ ಪ್ರಸ್ತಾಪಕ್ಕೆ ಸಂಪುಟವು ಮಂಗಳವಾರ ಹಸಿರುನಿಶಾನೆ ತೋರಿಸಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜ್ಯಕ್ಕೆ ಪುನರ್‌ನಾಮಕರಣ ಮಾಡುವ ಪ್ರಸ್ತಾಪವನ್ನು ಪ.ಬಂಗಾಳ ವಿಧಾನಸಭೆಯು ಅನುಮೋದಿಸಬೇಕಾಗಿದೆ. ಆ ಬಳಿಕ ಅದನ್ನು ಕೇಂದ್ರ ಸರಕಾರದ ಮುಂದಿಡಲಾಗುವುದು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಮಮತಾ ಸರಕಾರವು ಶೀಘ್ರವೇ ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆಯುವ ನಿರೀಕ್ಷೆಯಿದೆ. ವಿಧಾನಸಭೆಯಲ್ಲಿ ಆಡಳಿತಾರೂ ತೃಣಮೂಲ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಹೊಂದಿರುವುದರಿಂದ ಅಲ್ಲಿ ಈ ಪ್ರಸ್ತಾಪವು ಅಂಗೀಕಾರಗೊಳ್ಳುವುದು ಖಚಿತವಾಗಿದೆ.
ರಾಜ್ಯದ ಹೆಸರನ್ನು ಬದಲಿಸಬೇಕೆಂಬ ಬೇಡಿಕೆ ದೀರ್ಘಕಾಲದಿಂದಲೂ ಕೇಳಿಬರುತ್ತಿತ್ತು. ಪುನರ್‌ನಾಮಕರಣಕ್ಕೆ ಕೇಂದ್ರದ ಅನುಮೋದನೆ ದೊರೆತಲ್ಲಿ,ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡಬೇಕಾಗುತ್ತದೆ.
ಪಶ್ಚಿಮಬಂಗಾಳವನ್ನು ಬಂಗಾ ಅಥವಾ ಬಾಂಗ್ಲಾ ಎಂಬುದಾಗಿ ಪುನರ್‌ನಾಮಕರಣ ಮಾಡುವ ಸಾಧ್ಯತೆಯಿರುವುದಾಗಿ ಸರಕಾರದ ಮೂಲಗಳು ತಿಳಿಸಿವೆ.
ಬ್ರಿಟಿಶ್ ಆಳ್ವಿಕೆಯ ಕಾಲದಿಂದ ಕಲ್ಕತ್ತಾ ಎಂದು ಕರೆಯಲಾಗುತ್ತಿದ್ದ ಪ.ಬಂಗಾಳದ ರಾಜಧಾನಿಯನ್ನು 2001ರಲ್ಲಿ ಕೋಲ್ಕತಾ ಎಂದು ಪುನರ್ ನಾಮಕರಣ ಮಾಡಲಾಗಿತ್ತು.
ಪಶ್ಚಿಮಬಂಗಾಳ ಹೆಸರು ಬ್ರಿಟಿಶ್ ವಸಾಹತುಶಾಹಿಯನ್ನು ನೆನಪಿಸುತ್ತಿದೆಯೆಂದು ಕೆಲವರ ಅನಿಸಿಕೆಯಾಗಿದೆ. ಬ್ರಿಟಿಶರು ಬಂಗಾಳ ಪ್ರಾಂತ್ಯವನ್ನು ಹಿಂದೂಗಳ ಪ್ರಾಬಲ್ಯವಿರುವ ಪಶ್ಚಿಮಬಂಗಾಳ ಹಾಗೂ ಮುಸ್ಲಿಮರ ಪ್ರಾಬಲ್ಯದ ಪೂರ್ವ ಬಂಗಾಳವನ್ನಾಗಿ ವಿಭಜಿಸಿದ್ದರು.
ಆದರೆ ಪೂರ್ವಬಂಗಾಳವು, ಮೊದಲು ಪೂರ್ವ ಪಾಕಿಸ್ತಾನವೆಂಬುವದಾಗಿ ಕರೆಸಿಕೊಳ್ಳುತ್ತಿತ್ತು. 1972ರಲ್ಲಿ ಅದು ಪಾಕಿಸ್ತಾನದಿಂದ ವಿಮೋಚನೆಗೊಂಡು ಬಾಂಗ್ಲಾ ಎಂದು ಪುನರ್‌ನಾಮಕರಣಗೊಂಡಿತ್ತು.