‘ಸಮುದ್ರದಲ್ಲಿ ಜನರ ಯುದ್ಧ’ಕ್ಕೆ ಸಿದ್ಧರಾಗಿ :ಸೇನೆ, ಪೊಲೀಸರು, ಜನರಿಗೆ ಚೀನಾ ರಕ್ಷಣಾ ಸಚಿವ ಕರೆ

ಬೀಜಿಂಗ್, ಆ. 2: ‘‘ಸಾಗರದಾಚೆಯಿಂದ ಎದುರಾಗಿರುವ ಭದ್ರತಾ ಬೆದರಿಕೆಯನ್ನು ಎದುರಿಸಲು ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು’’ ‘‘ಸಮುದ್ರದಲ್ಲಿ ಜನರ ಯುದ್ಧಕ್ಕೆ’’ ಸಿದ್ಧವಾಗುವಂತೆ ಚೀನಾದ ರಕ್ಷಣಾ ಸಚಿವ ಚಾಂಗ್ ವಂಕ್ವಾನ್ ಒತ್ತಾಯಿಸಿದ್ದಾರೆ ಎಂದು ಸರಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯೊಂದು ತೀರ್ಪು ನೀಡಿದ ವಾರಗಳ ಬಳಿಕ ಚೀನಾ ರಕ್ಷಣಾ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ತೀರ್ಪನ್ನು ಚೀನಾ ಕೋಪದಿಂದ ತಿರಸ್ಕರಿಸಿದೆ.
ರಾಷ್ಟ್ರೀಯ ಭದ್ರತಾ ಪರಿಸ್ಥಿತಿ, ಅದರಲ್ಲೂ ಮುಖ್ಯವಾಗಿ ಸಮುದ್ರದಿಂದ ಎದುರಾಗಿರುವ ಬೆದರಿಕೆಯನ್ನು ಗಣನೆಗೆ ತೆಗೆದುಕೊಳ್ಳುವಂತೆ ಚಾಂಗ್ ಕರೆ ನೀಡಿದ್ದಾರೆ ಎಂದು ಕ್ಸಿನುವಾ ವಾರ್ತಾ ಸಂಸ್ಥೆ ಹೇಳಿದೆ.
ರಾಷ್ಟ್ರೀಯ ಸಾರ್ವಭೌಮತೆ ಮತ್ತು ಭೌಗೋಳಿಕ ಏಕತೆಯನ್ನು ರಕ್ಷಿಸಿಕೊಳ್ಳಲು ಒಂದಾಗುವಂತೆ ಸಚಿವರು ಸೇನೆ, ಪೊಲೀಸ್ ಮತ್ತು ಜನರಿಗೆ ಕರೆ ನೀಡಿದ್ದಾರೆ.
ಕರಾವಳಿ ಪ್ರಾಂತ ಝೆಜಿಯಾಂಗ್‌ಗೆ ನೀಡಿದ ಪ್ರವಾಸದ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಹೇಳಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ವಾಯು ನೆಲೆಗಳು ಮತ್ತು ಇತರ ಮಹತ್ವದ ಕಟ್ಟಡಗಳನ್ನು ನಿರ್ಮಿಸಲು ದ್ವೀಪಗಳು ಮತ್ತು ಹವಳ ದಿಬ್ಬಗಳನ್ನು ಚೀನಾ ವಶಪಡಿಸಿಕೊಳ್ಳುತ್ತಿದೆ.
ಹಲವು ನೆರೆಯ ದೇಶಗಳು ಇದೇ ದಕ್ಷಿಣ ಚೀನಾ ಸಮುದ್ರದ ಮೇಲೆ ಪ್ರತಿ ಹಕ್ಕು ಸಾಧಿಸುತ್ತಿರುವುದು ಉದ್ವಿಗ್ನತೆಗೆ ಕಾರಣವಾಗಿದೆ.
ಭೌಗೋಳಿಕ ಆಕ್ರಮಣದ ವಿರುದ್ಧ ಚೀನಾಕ್ಕೆ ಜಪಾನ್ ಎಚ್ಚರಿಕೆ
ಟೋಕಿಯೊ, ಆ. 2: ಸಮುದ್ರ ಗಡಿ ವಿವಾದಗಳಲ್ಲಿ ಆಕ್ರಮಣಕಾರಿ ನಿಲುವನ್ನು ತೆಗೆದುಕೊಳ್ಳುವ ಮೂಲಕ ಚೀನಾವು ತನ್ನ ನೆರೆ ದೇಶಗಳೊಂದಿಗೆ ಅನುದ್ದೇಶಿತ ಸಂಘರ್ಷದ ಕಿಡಿ ಹಚ್ಚುವ ಅಪಾಯಕ್ಕೆ ಕೈಹಾಕುತ್ತಿದೆ ಎಂದು ಜಪಾನ್ ಮಂಗಳವಾರ ಹೇಳಿದೆ.
ವಲಯದ ‘ಸೂಪರ್ ಪವರ್’ ಈಗಲೂ ಸರ್ವಾಧಿಕಾರ ಧೋರಣೆಯಿಂದ ವರ್ತಿಸುತ್ತಿದೆ ಹಾಗೂ ಅದರ ಕೃತ್ಯಗಳು ಅನುದ್ದೇಶಿತ ಪರಿಣಾಮಗಳನ್ನು ಉಂಟು ಮಾಡಬಹುದಾಗಿದೆ ಎಂದು ಟೋಕಿಯೊ ರಕ್ಷಣಾ ಶ್ವೇತಪತ್ರವೊಂದರಲ್ಲಿ ಹೇಳಿದೆ.
ದಕ್ಷಿಣ ಚೀನಾ ಸಮುದ್ರದ ಹಕ್ಕಿನ ಬಗ್ಗೆ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಚೀನಾ ಒಪ್ಪಿಕೊಳ್ಳಬೇಕು ಎಂಬುದಾಗಿ ಜಪಾನ್ ಕರೆ ನೀಡಿದೆ.







