ಕರೆನ್ಸಿ ನೋಟಿನ ಮೇಲಿನ ಗಾಂಧೀಜಿ ಚಿತ್ರ ಬದಲಿಸುವ ಯೋಜನೆಯಿಲ್ಲ:ಸರಕಾರ

ಹೊಸದಿಲ್ಲಿ,ಆ.2: ಕರೆನ್ಸಿ ನೋಟುಗಳ ಮೇಲಿರುವ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಬದಲಿಸುವ ಅಥವಾ ಇನ್ನೊಬ್ಬ ನಾಯಕರ ಚಿತ್ರವನ್ನು ಸೇರಿಸುವ ಯಾವುದೇ ಪ್ರಸ್ತಾವನೆಯನ್ನು ಸರಕಾರವು ಹೊಂದಿಲ್ಲ. ಯುಪಿಎ ಆಡಳಿತದ ಸಂದರ್ಭದಲ್ಲಿ ಉನ್ನತ ಮಟ್ಟದ ಸಮಿತಿಯೊಂದು ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸಹಾಯಕ ವಿತ್ತ ಸಚಿವ ಅರ್ಜುನ ರಾಮ್ ಮೇಘವಾಲ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಕರೆನ್ಸಿ ನೋಟುಗಳ ವಿನ್ಯಾಸ ಮತ್ತು ಭದ್ರತಾ ಲಕ್ಷಣಗಳನ್ನು ಸರಕಾರವು ಕಾಲಕಾಲಕ್ಕೆ ಆರ್‌ಬಿಐ ಜೊತೆ ಸಮಾಲೋಚಿಸಿ ನಿರ್ಧರಿಸುತ್ತದೆ ಮತ್ತು ದೇಶದಲ್ಲಿ ಕರೆನ್ಸಿ ನೋಟುಗಳ ಚಲಾವಣೆಯ ಕುರಿತ ನಿರ್ಧಾರವನ್ನು ಆರ್‌ಬಿಐ ತೆಗೆದುಕೊಳ್ಳುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಶ್ನೆವೇಳೆಯಲ್ಲಿ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಪ್ರಯುಕ್ತ ಕರೆನ್ಸಿ ನೋಟು ಅಥವಾ ನಾಣ್ಯವನ್ನು ಬಿಡುಗಡೆಗೊಳಿಸುವ ಪ್ರಸ್ತಾವನೆಯನ್ನು ಸರಕಾರವು ಹೊಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೇಘವಾಲ್, ಸರಕಾರವು ಈಗಾಗಲೇ ಇಂತಹ 125 ರೂ.ಗಳ ಸ್ಮಾರಕ ನಾಣ್ಯ ಮತ್ತು 10 ರೂ.ನ ಚಲಾವಣೆಯ ನಾಣ್ಯವನ್ನು ಹೊರಗೆ ತಂದಿದೆ. ಪ್ರಧಾನಿಯವರು 2015,ಡಿ.6ರಂದು ಇವುಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿಸಿದರು.





