ಗ್ರಹಿಸುವ ಸಾಮರ್ಥ್ಯಕ್ಕೆ ಸಾಹಿತ್ಯ ಸಹಕಾರಿ: ಡಾ.ಗಿರೀಶ್ ಭಟ್ ಅಜೆಕ್ಕಳ
ಮಂಗಳೂರು ವಿವಿ ಮಟ್ಟದ ಆಯ್ದ ಕಾಲೇಜುಗಳ ಯುವಜನರ ಪ್ರತಿಭಾನ್ವೇಷಣೆ

ಬಂಟ್ವಾಳ, ಆ.2: ವಿದ್ಯಾರ್ಥಿಗಳಲ್ಲಿ ಗ್ರಹಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಾಹಿತ್ಯ ಚಟುವಟಿಕೆಗಳು ಹೆಚ್ಚು ಸಹಕಾರಿಯಾಗುತ್ತದೆ ಎಂದು ಬಂಟ್ವಾಳ ಕಾಮಾಜೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಹೇಳಿದ್ದಾರೆ.
ಅರಿವು ಯುವ ಸಂವಾದ ಕೇಂದ್ರ ದ.ಕ. ಜಿಲ್ಲೆ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಂಗಳೂರು ಸಮುದಾಯ ರೇಡಿಯೊ ಸಾರಂಗ್‌ನ ಆಶ್ರಯದಲ್ಲಿ ಪತ್ರಕರ್ತರ ರಜತ ವರ್ಷಾಚರಣೆಯ ಅಂಗವಾಗಿ ಇತ್ತೀಚೆಗೆ ಬಂಟ್ವಾಳ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಆಯ್ದ ಕಾಲೇಜುಗಳ ಯುವಜನರ ಪ್ರತಿಭಾನ್ವೇಷಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರೂ ಜೊತೆಗೂಡಿ ಪ್ರತಿಭಾನ್ವೇಷಣೆಯ ಕಾರ್ಯಕ್ರಮ ನಡೆಸುತ್ತಿರುವುದು ಅಭಿನಂದನೀಯ ಎಂದ ಅವರು, ಅಭಿವ್ಯಕ್ತಿ, ವಿಶ್ಲೇಷಣೆ ಹಾಗೂ ಮಾಹಿತಿ ಹಂಚಿಕೊಳ್ಳುವಿಕೆಯಂತಹ ಪ್ರಕ್ರಿಯೆಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಕಾರವಾಗುತ್ತದೆ ಎಂದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೌನೇಶ ವಿಶ್ವಕರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತೀಕರಣದ ಈ ಕಾಲಘಟ್ಟದಲ್ಲಿ ಯುವಜನರನ್ನು ಹಾದಿ ತಪ್ಪಿಸುವ ಆಕರ್ಷಣೆಗಳೇ ಹೆಚ್ಚು ಹೆಚ್ಚು ಮೇಳೈಸುತ್ತಿದ್ದು, ಇಂತಹ ಕಾಲಘಟ್ಟದಲ್ಲಿ ಯುವಜನರು ಸರಿಯಾದ ಹಾದಿಯಲ್ಲಿ ಮುನ್ನಡೆಯಲು ಸಾಹಿತ್ಯ ಚಟುವಟಿಕೆಗಳು ಪ್ರೇರಣೆ ನೀಡಬಲ್ಲುದು ಎಂದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸದಾಶಿವ ಬಂಗೇರ, ರೇಡಿಯೋ ಸಾರಂಗ್‌ನ ಆರ್‌ಜೆ ಅಭಿಷೇಕ್ ಶೆಟ್ಟಿ, ಧವಳಾ ಕಾಲೇಜಿನ ಉಪನ್ಯಾಸಕಿ ಸವಿತಾ ಆಚಾರ್ಯ, ಪತ್ರಿಕೋದ್ಯಮ ವಿದ್ಯಾರ್ಥಿನಿ ಸಾಕ್ಷಿ ಸಜಿಪ ಉಪಸ್ಥಿತರಿದ್ದರು.
ಅರಿವು ಯುವ ಸಂವಾದ ಕೇಂದ್ರದ ನಾದ ಮಣಿನಾಲ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ರಜತ ವರ್ಷಾಚರಣಾ ಸಮಿತಿ ಸಂಚಾಲಕ ಹರೀಶ್ ಮಾಂಬಾಡಿ ಸ್ವಾಗತಿಸಿದರು. ಅರಿವು ಕೇಂದ್ರದ ಖಲೀಫ್ ವಂದಿಸಿದರು. ಅವಿನಾಶ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.
ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ, ಪತ್ರಕರ್ತ ಗೋಪಾಲ ಅಂಚನ್, ಸವಿತಾ ಆಚಾರ್ಯ, ಉದಯ ಕುಮಾರ್ ಜ್ಯೋತಿಗುಡ್ಡೆ, ವೌನೇಶ ವಿಶ್ವಕರ್ಮ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಅರಿವು ಯುವ ಸಂವಾದ ಕೇಂದ್ರದ ಕಾರ್ಯಕರ್ತರು ಸಹಕರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಬಂಟ್ವಾಳ, ಮಂಗಳೂರು, ಮುಡಿಪು, ವಾಮದಪದವು ಹಾಗೂ ಬೆಳ್ತಂಗಡಿ ತಾಲೂಕುಗಳ ವಿವಿಧ ಸರಕಾರಿ ಕಾಲೇಜುಗಳ 60ಕ್ಕೂ ಅಧಿಕ ವಿದ್ಯಾರ್ಥಿಗಳು ಲೇಖನ, ಕವನ, ಭಾಷಣ, ಕಿಶೋರ್ ಪೆರಾಜೆಯವರ ಚಿತ್ರಕ್ಕೊಂದು ಭಾವ ಪ್ರಬಂಧ ಹಾಗೂ ಗೀತಗಾಯನದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.







