ವಿದ್ಯುತ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಮನವಿ

ಸಿದ್ದಾಪುರ, ಆ.2: ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಚೆಸ್ಕಾಂ ಕಚೇರಿ ಎದುರು ಸಿಪಿಎಂ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿದ್ದಾಪುರ ಪಟ್ಟಣದಿಂದ ಚೆಸ್ಕಾಂ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಚೆಸ್ಕಾಂ ಕಚೇರಿ ಮುಂದೆ ಜಮಾಯಿಸಿ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಪಕ್ಷದ ಮುಖಂಡ ಅನಿಲ್ ಕುಟ್ಟಪ್ಪಮಾತನಾಡಿ, ಗ್ರಾಮದಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಶಾಲೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಗ್ರಾಮದಲ್ಲಿ ಆನೆ ಹಾವಳಿ ಇರುವುದರಿಂದ ಸಂಜೆ ವೇಳೆ ಮನೆಗೆ ತೆರಳಲು ಕಷ್ಟ ಎದುರಾಗುತ್ತಿದೆ ಎಂದರು. ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡ ಸಂದರ್ಭ ಕಚೇರಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸಲು ಯಾರೂ ಕೂಡಾ ಕಚೇರಿಯಲ್ಲಿ ಇರುವುದಿಲ್ಲ. ಕರೆ ಸ್ವೀಕರಿಸಿದರೂ ಸಮರ್ಪಕವಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ನೆಲ್ಯಹುದಿಕೇರಿ ಮತ್ತು ಕೂಡುಗದ್ದೆ ಲೈನ್‌ಗೆ ಒಂದೇ ಸಂಪರ್ಕ ಕಲ್ಪಿಸಿದ ಕಾರಣ ಸಮಸ್ಯೆ ಹೆಚ್ಚಾಗಿದೆ. ಗುಹ್ಯ ಗ್ರಾಮದಲ್ಲಿ ದಿನದ 20 ಗಂಟೆಗೂ ಅಧಿಕ ಕಾಲ ವಿದ್ಯುತ್ ಇರುವುದಿಲ್ಲ. ಇದರಿಂದಾಗಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗುತ್ತಿಲ್ಲ ಎಂದು ಆರೋಪಿಸಿದರು.
ಎಲ್ಲ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಚೆಸ್ಕಾಂ ಇಲಾಖೆ ಎಇಇ ಪಿ.ಎಸ್ ಸುರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಕೂಡುಗದ್ದೆ ಕಾವೇರಿ ಹೊಳೆಯ ಸಮೀಪದವರೆಗೆ 11ಕೆಬಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಗುಹ್ಯ, ಕೂಡುಗದ್ದೆ, ನೆಲ್ಯಹುದಿಕೇರಿ ಮತ್ತು ಕರಡಿಗೋಡು ಭಾಗಕ್ಕೆ 11ಕೆಬಿ ಸಂಪರ್ಕ ಕಲ್ಪಿಸಿದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಸಾಲಿ ಪೌಲೋಸ್, ಸಿಪಿಎಂ ಮುಖಂಡ ಮುಸ್ತಫಾ, ರಾಮನ್ ಕುಟ್ಟಿ ಮತ್ತಿತರರು ಉಪಸ್ಥಿತರಿದ್ದರು.







