ರೈತರ ಮೇಲೆ ಎಪಿಎಂಸಿ ಅಧಿಕಾರಿಗಳ ದೌರ್ಜನ್ಯ
ಸೊಪ್ಪು-ಬೆಳೆಗಾರರಿಂದ ಪ್ರತಿಭಟನೆ, ಜಿಲ್ಲಾಡಳಿತಕ್ಕೆ ಮನವಿ

ಶಿವಮೊಗ್ಗ, ಆ. 2: ತರಕಾರಿ ಮಾರುಕಟ್ಟೆಯ ಸಗಟು ಮಾರಾಟಗಾರರೊಂದಿಗೆ ಕೃಷಿ ಉತ್ಪನ್ನ ಮಾರಾಟ ಸಮಿತಿ (ಎಪಿಎಂಸಿ)ಯ ಕೆಲ ಅಧಿಕಾರಿಗಳು ಶಾಮೀಲಾಗಿ, ಚಿಲ್ಲರೆ ದರದಲ್ಲಿ ಸೊಪ್ಪು ಮಾರಾಟ ಮಾಡುವ ರೈತರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಮಂಗಳವಾರ ನಗರದ ಡಿ.ಸಿ. ಕಚೇರಿಯ ಮುಂಭಾಗ ಸೊಪ್ಪು-ತರಕಾರಿ ಬೆಳೆಯುವ ರೈತರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ ರೈತರು, ರೈತರು ನ್ಯಾಯಯುತವಾಗಿ ನಡೆಸುತ್ತಿರುವ ಚಿಲ್ಲರೆ ವ್ಯಾಪಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಸಗಟು ವ್ಯಾಪಾರಸ್ಥರು ಚಿಲ್ಲರೆ ವ್ಯಾಪಾರ ನಡೆಸದಂತೆ ಕ್ರಮಕೈಗೊಳ್ಳಬೇಕು. ರೈತರ ಮೇಲೆ ದೌರ್ಜನ್ಯ ನಡೆಸುವ ಎಪಿಎಂಸಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಆರೋಪವೇನು?:
ವಿನೋಬನಗರದ 100 ಅಡಿ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯ ಬಳಿ ರೈತರು ಬೆಳೆದ ಸೊಪ್ಪು-ತರಕಾರಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸಗಟು ವ್ಯಾಪಾರಕ್ಕೆ ಮಾತ್ರ ಅವಕಾಶವಿರುವ ಕೆಲ ದೊಡ್ಡ ದೊಡ್ಡ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂಭಾಗ ಚಿಲ್ಲರೆ ದರದಲ್ಲಿಯೂ ಸೊಪ್ಪು-ತರಕಾರಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರ ಸೊಪ್ಪು -ತರಕಾರಿ ಕೊಳ್ಳುವವರೇ ಇಲ್ಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಅಲ್ಲದೆ ರೈತರು ಮಾರಾಟ ಮಾಡುವ ಸ್ಥಳಕ್ಕೆ ಆಗಮಿಸುವ ಕೆಲ ಸಗಟು ವ್ಯಾಪಾರಸ್ಥರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಗಲಾಟೆ ಮಾಡುದತ್ತಿದ್ದಾರೆ. ಹಾಗೆಯೇ ಎಪಿಎಂಸಿಯ ಕೆಲ ಅಧಿಕಾರಿಗಳು ಕೂಡ ಸಗಟು ವ್ಯಾಪಾರಿಗಳೊಂದಿಗೆ ಕೈಜೋಡಿಸಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಲಂಚಕ್ಕೆ ಪೀಡಿಸುತ್ತಿದ್ದಾರೆ. ಪೊಲೀಸರ ಮೂಲಕ ನಮ್ಮನ್ನು ತೆರವುಗೊಳಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಅನಧಿಕೃತ: ಮತ್ತೊಂದೆಡೆ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ಅನಧಿಕೃತವಾಗಿ ಮಳಿಗೆ ತೆರೆದು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಪಾರ್ಕಿಂಗ್ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಪಿಎಂಸಿಯವರು ಯಾವುದೇ ಕ್ರಮ ಜರಗಿಸಿಲ್ಲವೆಂದು ಪ್ರತಿಭಟನಾಕಾರರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮಧ್ಯಪ್ರವೇಶಿಸಬೇಕು. ರೈತರು ಬೆಳೆದ ತರಕಾರಿ-ಸೊಪ್ಪು ಮಾರಾಟಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ರೈತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಎಪಿಎಂಸಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಹಾಗೂ ಕೆಲ ಸಗಟು ವ್ಯಾಪಾರಸ್ಥರಿಂದಾಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ರೈತರ ಪ್ರತಿಭಟನೆಗೆ ಯುವ ಕಾಂಗ್ರೆಸ್ ಮುಖಂಡರಾದ ಕೆ.ರಂಗನಾಥ್, ಪ್ರವೀಣ್‌ಕುಮಾರ್, ಈಶ್ವರ್‌ರವರು ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿದ್ದರು. ಉಳಿದಂತೆ ಸೊಪ್ಪು-ತರಕಾರಿ ಬೆಳೆಗಾರರಾದ ಮಾಲತೇಶ್, ಪ್ರಶಾಂತ್, ಕಮಲಮ್ಮ, ಚೌಡಮ್ಮ, ಬಸವರಾಜ್, ನಾಗೇಶ್ ಮತ್ತಿತರರಿದ್ದರು.







