ದೇವರಾಜ ಅರಸು ಜನ್ಮಶತಮಾನೋತ್ಸವಕೆ್ಕ ಅದ್ದೂರಿ ಚಾಲನೆ: ಜಿಲ್ಲಾಧಿಕಾರಿ ಜಿ.ಸತ್ಯವತಿ

ಚಿಕ್ಕಮಗಳೂರು, ಆ.2: ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ, ಆರ್ಥಿಕ ಕ್ಷೇತ್ರದ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಶತಮಾನೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದ್ದಾರೆ.
ಅವರು ಇಂದು ನಗರದ ಜಿಪಂ ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ದಿವಂಗತ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಡವರ ಬದುಕಿನಲ್ಲಿ ಹೊಸ ಭರವಸೆಯನ್ನು ತಂದುಕೊಟ್ಟ ಡಿ.ದೇವರಾಜ ಅರಸು ಅವರು ರಾಜ್ಯದಲ್ಲಿ ಆರ್ಥಿಕ ಸಾಮಾಜಿಕ ಆಂದೋಲನದ ಮೂಲಕ ಹಲವು ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಅಪಾರ ಕೊಡುಗೆ ನೀಡಿದ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಆ.20 ರಂದು ಬೆಳಗ್ಗೆ 9:30ಕ್ಕೆ ಡಿ.ದೇವರಾಜ ಅರಸು ಅವರ ಭಾವಚಿತ್ರ, ವಿವಿಧ ಕಲಾತಂಡಗಳು ಹಾಗೂ ಸ್ತಬ್ಧ ಚಿತ್ರಗಳೊಂದಿಗೆ ಹಳೆ ತಾಲೂಕು ಕಚೇರಿಯಿಂದ ಮೆರವಣಿಗೆ ಪ್ರಾರಂಭಗೊಂಡು ಮಹಾತ್ಮಾ ಗಾಂಧಿ ರಸ್ತೆ ಮುಖಾಂತರ ಸಾಗಿ ಕುವೆಂಪು ಕಲಾಮಂದಿರದಲ್ಲಿ ಸಮಾವೇಶಗೊಳ್ಳಲಿದೆ.
ನಂತರ ಕುವೆಂಪು ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಬೆಳಗ್ಗೆ 10:30 ಕ್ಕೆ ನಡೆಯಲಿದ್ದು, ಅರಸುರವರ ತತ್ವಗಳು ಹಾಗೂ ಆದರ್ಶಗಳ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ ಎಂದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಗ್ರಾಪಂ, ತಾಪಂ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳಿಗೆ, ಗಣ್ಯರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕರು ಹಾಗೂ ಅಧಿಕಾರಿಗಳು ಮತ್ತು ಸರಕಾರಿ ನೌಕರರು ದಿವಂಗತ ದೇವರಾಜು ಅರಸುರವರ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ ಅವರು, ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕೆಂದರು. ಹಿಂದುಳಿದ ವರ್ಗದ ಒಕ್ಕೂಟದ ಕಾರ್ಯದರ್ಶಿ ಎ.ಎನ್ ಮಹೇಶ್ ಮಾತನಾಡಿ, ಅರಸುರವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ಮನ ಮುಟ್ಟಿಸುವ ಕೆಲಸ ಈ ದಿನಾಚರಣೆಗಳಲ್ಲಿ ಆಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರೇಗೌಡ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್.ರಾಗಪ್ರಿಯಾ, ಆರ್.ಸ್ನೇಹಲ್, ರವೀಂದ್ರ ಬೆಳವಾಡಿ, ಮಹೇಶ ಸುರೇಶ್, ಮುಖಂಡರಾದ ಜನಕ ರಾಜ್‌ಅರಸ್, ಕೆ.ಟಿ.ರಾಧಕೃಷ್ಣ, ಈಶ್ವರ್, ತೇಗೂರು ಜಗದೀಶ್, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







