ಮೆಟ್ರೋ ಸುರಂಗ ಮಾರ್ಗದಬಳಿ ಭೂ ಕುಸಿತ

ಬೆಂಗಳೂರು, ಆ.2: ನಗರದ ಕೆ.ಜಿ.ರಸ್ತೆಯ ಮೆಟ್ರೋ ಸುರಂಗ ಮಾರ್ಗದ ಸಮೀಪವೇ ಸುಮಾರು 10 ಅಡಿಗಳಷ್ಟು ಭೂ ಕುಸಿತ ಉಂಟಾಗಿದ್ದು, ಜನರು ಆತಂಕ ಪಡುವಂತಹ ಪರಿಸ್ಥಿತಿ ನಿರ್ಮಾಣ ವಾಯಿತು.
ಮಂಗಳವಾರ ಬೆಳಗ್ಗೆ ಭೂ ಕುಸಿತ ಉಂಟಾಯಿತು. ಕೂಡಲೇ ಟ್ರಾಫಿಕ್ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ವಾಹನ ಸಂಚಾರವನ್ನು ನಿರ್ಬಂಧಿ ಸಿದರು. ವಿಷಯ ತಿಳಿದ ಬಿಎಂಆರ್‌ಸಿಎಲ್ ಸಿಬ್ಬಂದಿ ಸಿಮೆಂಟ್ ಲಾರಿಯನ್ನು ಬಳಸಿಕೊಂಡು ಗುಂಡಿಯನ್ನು ಮುಚ್ಚುವಲ್ಲಿ ಯಶಸ್ವಿಯಾದರು.
ಪರಿಶೀಲನೆ:
ಮೆಟ್ರೋ ಸುರಂಗ ಮಾರ್ಗದ ಸಮೀಪವೇ ಭೂ ಕುಸಿತವಾಗಿರುವುದರಿಂದ ಬಿಎಂಆರ್‌ಸಿಎಲ್ ಮುಖ್ಯ ಇಂಜಿನಿಯರ್ ಯಗ್ಗಾರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಮೆಟ್ರೋ ಸುರಂಗ ಮಾರ್ಗ ನಿರ್ಮಿಸಿ 4 ವರ್ಷಗಳಾಗಿವೆ. ಆಗಿನಿಂದಲೂ ಯಾವ ಸಮಸ್ಯೆಯು ಆಗಲಿಲ್ಲ. ಈಗ ದಿಢೀರನೆ ಭೂ ಕುಸಿತವಾಗಿರುವುದು ಆಶ್ಚರ್ಯವಾಗಿದೆ. ಹೀಗಾಗಿ ಪರಿಶೀಲನೆ ನಡೆಸಿ ಭೂ ಕುಸಿತಕ್ಕೆ ಸೂಕ್ತ ಕಾರಣ ತಿಳಿಯಲಾಗುವುದು ಎಂದರು.
ಬಿಎಂಆರ್‌ಸಿಎಲ್ ಸಂಪರ್ಕಾಧಿಕಾರಿ ವಸಂತರಾವ್ ಮಾತನಾಡಿ, ವೆುಟ್ರೋ ಸಮೀಪವೇ ಭೂ ಕುಸಿತ ಆಗಿರುವುದಕ್ಕೆ ನಿಖರವಾದ ಕಾರಣ ಹುಡುಕಬೇಕಾಗಿದೆ. ಇಲ್ಲಿಯೆ 16 ಇಂಚಿನ ಪೈಪ್‌ಗಳು ಹಾದು ಹೋಗಿದ್ದು, ಆ ಬಗ್ಗೆಯೂ ಪರಿಶೀಲನೆ ನಡೆಸ ಬೇಕಾಗುತ್ತದೆ. ಭೂ ಕುಸಿತಕ್ಕೆ ಸರಿಯಾದ ಕಾರಣ ಹುಡುಕಿ ಶಾಶ್ವತ ವಾದ ಪರಿಹಾರ ಹುಡುಕಲಾಗುವುದು ಎಂದು ತಿಳಿಸಿದರು.
ಮೆಟ್ರೋ ಸಂಚಾರಕ್ಕೆ ಅಡ್ಡಿಯಿಲ್ಲ: ಮೆಟ್ರೋ ಸುರಂಗ ಮಾರ್ಗದ ಸಮೀಪವೇ ಸುಮಾರು 10ಅಡಿಯಷ್ಟು ಭೂ ಕುಸಿತ ಸಂಭವಿಸಿದೆ. ಇದರಿಂದ ಸುರಂಗ ಮಾರ್ಗಕ್ಕೆ ಅಪಾಯವಿಲ್ಲ. ಎಂದಿನಂತೆ ಮೆಟ್ರೋ ರೈಲು ಸಂಚಾರ ನಡೆಯಲಿದ್ದು, ಜನತೆ ಆತಂಕ ಪಡಬೇಕಾಗಿಲ್ಲ ಎಂದರು.





