ಕಳಪೆ ಆಹಾರ ಪೂರೆಸಿದರೆ ಕ್ರಿಮಿನಲ್ ಮೊಕದ್ದಮೆ: ಸಚಿವೆ ಉಮಾಶ್ರೀ

ಬೆಂಗಳೂರು, ಆ.2: ರಾಜ್ಯದ ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಂಗನವಾಡಿಗಳಿಗೆ ಕೆಲವೆಡೆ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳು ಸರಬರಾಜಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಕಳಪೆ ಆಹಾರ ಪೂರೈಕೆ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವಂತೆ ಆದೇಶಿಸಿದರು.
ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವವರ ಪಟ್ಟಿ ಸಿದ್ದಪಡಿಸಿ, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ. ಈ ಬಗ್ಗೆ ಅನಾಸಕ್ತಿ ತೋರುವ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಉಮಾಶ್ರೀ ಎಚ್ಚರಿಕೆ ನೀಡಿದರು.
ಎಲ್ಲ ಉಪನಿರ್ದೇಶಕರು ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಪೂರೈಕೆದಾರರಿಗೂ ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡುವಂತೆ ಉಮಾಶ್ರೀ ಸೂಚನೆ ನೀಡಿದರು.
1,393 ಹೊಸ ಅಂಗನವಾಡಿ ಕೇಂದ್ರಗಳು ಮಂಜೂರು: ಸಮಗ್ರ ಶಿಶು ಅಭಿವೃದ್ಧಿ ಸೇವೆ ಯೋಜನೆ ಯಡಿಯಲ್ಲಿ ರಾಜ್ಯದಲ್ಲಿ 1,393 ಹೊಸ ಅಂಗನವಾಡಿ ಕೇಂದಗ್ರಳನ್ನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಾದ 1,393 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1,393 ಅಂಗನವಾಡಿ ಸಹಾಯಕಿಯರು ಜೊತೆಗೆ 56 ಮೇಲ್ವಿಚಾರಕಿಯರ ಹುದ್ದೆಗಳನ್ನೂ ಸೃಷ್ಟಿಸಲಾಗಿದೆ ಎಂದು ಉಮಾಶ್ರೀ ಹೇಳಿದರು.
ಬಾಕಿಯಿರುವಂತಹ ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ಆ.15ರೊಳಗೆ ವಿತರಿಸಬೇಕು. ಅಲ್ಲದೆ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಎಲ್ಲ ಉಪನಿರ್ದೇಶಕರು ವಿಶೇಷ ಆಸಕ್ತಿ ವಹಿಸಬೇಕು. ಪ್ರಕರಣಗಳು ನಡೆದ ಬಗ್ಗೆ ಮಾಹಿತಿ ಬಂದಲ್ಲಿ ಕೂಡಲೇ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಇಲಾಖೆ ನಿರ್ದೇಶಕಿ ಎಂ.ದೀಪಾ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.





