ಹೊಸ ಮದ್ಯದಂಗಡಿ ಪ್ರಸ್ತಾವ ಸರಕಾರದ ಮುಂದಿಲ್ಲ: ಸಚಿವ ಎಚ್.ವೆ.ಮೇಟಿ

ಬೆಂಗಳೂರು, ಆ. 2: ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಬೇಡಿಕೆಯಿದ್ದರೂ ಹೊಸ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಯಾವುದೇ ಪ್ರಸ್ತಾವ ರಾಜ್ಯ ಸರಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಎಚ್.ವೈ.ಮೇಟಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕುಡಿತ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾರೂ ಕುಡಿಯಬಾರದೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕುಡಿತದಿಂದ ಸಂಸಾರಗಳು ಹಾಳಾಗುತ್ತಿವೆ. ಹೀಗಾಗಿ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಪ್ರಸ್ತಾವವಿಲ್ಲ ಎಂದು ಪುನರುಚ್ಚರಿಸಿದರು.
ಗುರಿ ನೀಡಿಲ್ಲ: ಆದಾಯ ಸಂಗ್ರಹಿಸಲು ಅಬಕಾರಿ ಇಲಾಖೆಗೆ ಯಾವುದೇ ಗುರಿ ನೀಡಿಲ್ಲ. ಇಂತಿಷ್ಟು ಮಾರಾಟ ಮಾಡಲೇಬೇಕೆಂಬುದಕ್ಕೆ ಕಡ್ಡಾಯವನ್ನು ಮಾಡಿಲ್ಲ ಎಂದ ಅವರು, ಪ್ರಸ್ತುತ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 16,500 ಕೋಟಿ ರೂ.ಸಂಗ್ರಹಿಸಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
ಅಗತ್ಯತೆ ಆಧಾರದ ಮೇಲೆ ರಾಜ್ಯಾದ್ಯಂತ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್(ಎಂಎಸ್‌ಐಎಲ್) ಮಳಿಗೆಗಳನ್ನು ಹೆಚ್ಚಿಸಲು ನಿರ್ಧರಿಸಿದ್ದು, ಈ ಸಂಬಂಧ ಚರ್ಚಿಸಿ ಹೊಸ ಮಳಿಗೆಗಳಿಗೆ ಪರವಾನಿಗೆ ನೀಡಲಾಗುವುದು ಎಂದು ಮೇಟಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿನ ಕಳ್ಳಭಟ್ಟಿ ದಂಧೆ ನಿಯಂತ್ರಿಸಲು ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕಳ್ಳಭಟ್ಟಿ ದಂಧೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್.ವೈ.ಮೇಟಿ ಇದೇ ವೇಳೆ ಸ್ಪಷ್ಟಣೆ ನೀಡಿದರು.
ಕಡಿವಾಣ: ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಸಂಬಂಧ ವ್ಯಾಪಕ ದೂರು ಗಳಿವೆ. ಆ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ಇಲಾಖೆ ಅಧಿಕಾರಿಗಳ ಸಭೆ ಕರೆದು ಕಡಿವಾಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಮೇಟಿ ವಿವರ ನೀಡಿದರು. ರಾಜ್ಯದಲ್ಲಿ ಪ್ರಸಕ್ತ ಸಂದರ್ಭದಲ್ಲಿ ಮದ್ಯಪಾನ ನಿಷೇಧ ಅಸಾಧ್ಯ. ಕೆಲ ರಾಜ್ಯಗಳಲ್ಲಿ ಪಾನ ನಿಷೇಧ ಮಾಡಿದ್ದರೂ, ಕರ್ನಾಟಕ ರಾಜ್ಯದಲ್ಲಿ ಅದು ಸಾಧ್ಯವಿಲ್ಲ ಎಂದ ಅವರು, ಚಿಲ್ಲರೆ ಮದ್ಯದಂಗಡಿ(ಸಿಎಲ್-2)ಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ತಡೆಗಟ್ಟಲು ಪ್ರತೀ ಅಂಗಡಿಗಳ ಮುಂದೆ ದರಪಟ್ಟಿ ಪ್ರದರ್ಶನಕ್ಕೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಬೆಂಗಳೂರು ನಗರದಲ್ಲಿ ರಾತ್ರಿ 1ಗಂಟೆಯ ವರೆಗೂ ಮದ್ಯ ಮಾರಾಟ ಹಾಗೂ ಪೂರೈಕೆಗೆ ಅವಕಾಶ ಕಲ್ಪಿಸಿದ್ದು, ಇದನ್ನು ಮೈಸೂರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯ ಉಳಿದ ನಗರಗಳಿಗೆ ವಿಸ್ತರಿಸುವ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಸಚಿವರು ಸ್ಪಷ್ಟಣೆ ನೀಡಿದರು.
‘ಕೆಲಸದ ಒತ್ತಡದಲ್ಲಿರುವ ಬೆಂಗಳೂರು ನಗರದ ಜನತೆ ಅನುಕೂಲಕ್ಕಾಗಿ ಮದ್ಯ ಮಾರಾಟ ಅವಧಿ ವಿಸ್ತರಿಸಲಾಗಿದೆ. ಇಲ್ಲಿನ ಮದ್ಯಪಾನಿಗಳು ಬಹಳ ಸುಸಂಸ್ಕೃತರು. ಅವರೆಂದೂ ಮದ್ಯ ಸೇವಿಸಿ ಬೇಕಾಬಿಟ್ಟಿಯಾಗಿ ರಸ್ತೆ, ಚರಂಡಿಗಳಲ್ಲಿ ಬೀಳುವುದಿಲ್ಲ. ಆದರೆ, ಗ್ರಾಮೀಣ ಪ್ರದೇಶದ ರಸ್ತೆ, ಗಟಾರಗಳಲ್ಲಿ ಮದ್ಯಪಾನಿ ಗಳು ಹೆಚ್ಚಾಗಿರುತ್ತಾರೆ’
-ಎಚ್.ವೈ.ಮೇಟಿ, ಅಬಕಾರಿ ಸಚಿವ







