ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಹೃದಯಸ್ಪರ್ಶಿ ಪತ್ರ
ರಾಕೇಶ್ ಅಗಲಿಕೆಯ ನೋವನ್ನು ಒಟಾ್ಟಗಿ ಅನುಭವಿಸೋಣ
ಬೆಂಗಳೂರು, ಆ.2: ಬದುಕು ಎನ್ನುವುದು ನದಿಯ ಹಾಗೆ ಕೊನೆ ಇಲ್ಲದ ಪಯಣ, ಯಾವುದೂ ನಮ್ಮ ಜೊತೆ ಉಳಿಯುವುದಿಲ್ಲ. ಉಳಿಯುವುದೊಂದೇ ಹೃದಯಕ್ಕೆ ತಟ್ಟಿದ ನೆನಪು ಮಾತ್ರ...
ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬರೆದ ಪಾತ್ರದ ಸಾಲುಗಳು. ಪುತ್ರ ರಾಕೇಶ್ ಸಾವಿನಿಂದಾಗಿ ದುಗುಡದಲ್ಲಿರುವ ಸಿದ್ದರಾಮಯ್ಯಗೆ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಸಾಂತ್ವಾನ ಹೇಳುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರದಲ್ಲಿ ಮುಂದುವರಿಸಿ, ಪ್ರಿಯ ಮಿತ್ರ ರಾಕೇಶ್ ಅಗಲಿಕೆ ನಮ್ಮ ನೆನಪಿನಲ್ಲಿ ಉಳಿಸುವುದು ಅವನ ಸಿಹಿನೆನಪು ಮಾತ್ರ. ಬಹುಶಃ ಯಾರಿಗೂ ಬರಬಾರದ ನೋವನ್ನು ನೀವು ಅನುಭವಿಸುತ್ತಿದ್ದೀರಿ. ರಾಕೇಶ್ ಅಗಲಿಕೆ ನೋವನ್ನು ನಾವೆಲ್ಲರೂ ಒಟ್ಟಾಗಿ ಅನುಭವಿಸೋಣ. ಬದುಕು ನಮಗೇನು ನೀಡುವುದೋ ಅದನ್ನು ಸ್ವೀಕರಿಸೋಣ.
ನಾಡನ್ನು ಮುನ್ನಡೆಸಬೇಕಾದ ನೀವು ಧೈರ್ಯ ಗೆಡಬಾರದು. ನೀವು ರಾಕೇಶನ ಸ್ಥಿತಿಗತಿಗಳನ್ನು ಗಮನಿಸುವ ಉಮೇದಿನಲ್ಲಿದ್ದಾಗ ರಾಜ್ಯದಲ್ಲಿ ಅಹಿತಕರ ಘಟನೆಗಳು ಜರಗಿದವು. ನರಗುಂದ ಪಟ್ಟಣ ಮತ್ತು ತಾಲೂಕಿನ ಅನೇಕ ಗ್ರಾಮಗಳು ಹಾಗೂ ನವಲುಗುಂದಗಳಲ್ಲಿ ಪೊಲೀಸರು ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರೈತರಿಗೆ ಸಾಂತ್ವನ ಹೇಳಿ: ಪೊಲೀಸರ ದೌರ್ಜನ್ಯದಿಂದ ನವಲುಗುಂದ ತಾಲೂಕಿನ ಯಮನೂರು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಪೊಲೀಸರ ಲಾಠಿಗೆ ಗರ್ಭಿಣಿ ಮತ್ತು ಮಕ್ಕಳು ತುತ್ತಾಗಿದ್ದಾರೆ. ನೋವಿನಿಂದ ಕಂಗೆಟ್ಟಿರುವ ಗ್ರಾಮಸ್ಥರು ಯಾರನ್ನೂ ನಂಬದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಾವು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಾಂತ್ವನ ಹೇಳುವ ಅಗತ್ಯವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.





