ದೌರ್ಜನ್ಯ ಪ್ರಕರಣ: ನವಲಗುಂದ ಸಿಪಿಐ, 8 ಪೇದೆಗಳ ಅಮಾನತು

ಬೆಂಗಳೂರು, ಆ.2: ಮಹಾದಾಯಿ ಹೋರಾಟದ ಸಂದರ್ಭದಲ್ಲಿ ಅಮಾಯಕರ ಮೇಲೆ ಲಾಠಿ ಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನವಲಗುಂದ ಸಿಪಿಐ ಹಾಗೂ ಎಂಟು ಪೊಲೀಸ್ ಪೇದೆಗಳನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ನವಲಗುಂದದ ಎಂ.ಎಸ್.ಚೌಡಣ್ಣವರ, ಉಮೇಶ್ ಮಡಿವಾಳರ, ಬೆಳಗಾವಿಯ ಶಿವು ನರಗುಂದ, ಮಲ್ಲಪ್ಪ ಗುದ್ಲಿ, ವಿಜಯಪುರದ ಬಿ.ಎನ್.ಲೋಗಾವಿ, ಎಲ್.ಎಫ್.ಸ್ವಾಮಿ ಸೇರಿ ಎಂಟು ಮಂದಿ ಪೊಲೀಸ್ ಪೇದೆಗಳನ್ನು ಸಂಬಂಧಪಟ್ಟ ಅಧಿಕಾರಿ ಧಾರವಾಡ ಎಸ್ಪಿ ಧರ್ಮೇಂದ್ರಕುಮಾರ್ ಅಮಾನತು ಮಾಡಿದ ಆದೇಶವನ್ನು ಹೊರಡಿಸಿದ್ದಾರೆ.
ಯಮನೂರು ಗ್ರಾಮಸ್ಥರ ಮೇಲೆ ನಡೆದ ಪೊಲೀಸರ ದೌರ್ಜನ್ಯಕ್ಕೆ ಸಾರ್ವಜನಿಕರಿಂದ ತೀವ್ರವಾದ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ನವಲಗುಂದ ಸಿಪಿಐ, ಪಿಎಸ್ಸೈಅನ್ನು ಅಮಾನತುಗೊಳಿಸಿ, ಧಾರವಾಡ ಡಿವೈಎಸ್ಪಿಯನ್ನು ಎತ್ತಂಗಡಿ ಮಾಡಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆದೇಶಿಸಿದ್ದರು. ಈಗ ದೌರ್ಜನ್ಯದಲ್ಲಿ ನೇರವಾಗಿ ಭಾಗಿಗಳಾಗಿದ್ದ ಪೇದೆಗಳನ್ನು ಅಮಾನತುಗೊಳಿಸಲಾಗಿದೆ.
ಮಹಾದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ರೈತರು ರಸ್ತೆಗಿಳಿದು ಹೋರಾಟ ಮಾಡಿದ್ದರು. ಈ ವೇಳೆ ಕೆಲವು ಪ್ರತಿಭಟನಾಕಾರರು ಸರಕಾರಿ ಕಟ್ಟಡಗಳಿಗೆ ಕಲ್ಲುತೂರಿ ಕಿಟಕಿ ಗಾಜುಗಳನ್ನು ಪುಡಿಗಟ್ಟಿ, ಸರಕಾರಿ ಕಡತಗಳಿಗೆ ಹಾನಿ ಮಾಡಿದ್ದರು, ಸೇವಾನಿರತ ನೌಕರರಿಗೆ ಅಡ್ಡಿಪಡಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಪೊಲೀಸರು ನವಲಗುಂದದ ಯಮನೂರು ಗ್ರಾಮಕ್ಕೆ ನುಗ್ಗಿ ಮುದುಕರು, ಮಹಿಳೆಯರು, ಮಕ್ಕಳ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸಿದ್ದರು.
ಒತ್ತಡಕ್ಕೆ ಮಣಿದ ಸರಕಾರ: ಯಮನೂರಿಗೆ ನುಗ್ಗಿದ ಪೊಲೀಸರು ಮನೆಮನೆಗೆ ನುಗ್ಗಿ ಗರ್ಭಿಣಿ, ವೃದ್ಧರನ್ನು ಥಳಿಸಿದ್ದರು.
ಈ ದೌರ್ಜನ್ಯವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದರು. ಹಾಗೆಯೆ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದಕ್ಕೆ ಮಣಿದಿರುವ ಸರಕಾರ ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿದೆ.







