ದೌರ್ಜನ್ಯ ನಡೆಸಿದವರು ಕತ್ತೆಗಳು: ಮಂಜುಳಾ ಮಾನಸಾ ಆಕ್ರೋಶ

ಧಾರವಾಡ, ಆ.2: ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಪೊಲೀಸರು ಮಹಿಳೆಯರು, ಮಕ್ಕಳು ಎಂಬುದನ್ನು ನೋಡದೆ ದೌರ್ಜನ್ಯ ವೆಸ ಗಿದ್ದಾರೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಯಮನೂರು ಗ್ರಾಮಕ್ಕೆ ಭೇಟಿ ನೀಡಿದ ಅವರು, ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವವರು ಮನುಷ್ಯರಲ್ಲ, ಕತ್ತೆಗಳು. ಗ್ರಾಮದಲ್ಲಿ ಸಾಮೂಹಿಕ ದೌರ್ಜನ್ಯ ನಡೆದಿದೆ. ಆದುದರಿಂದ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪೊಲೀಸರ ದೌರ್ಜನ್ಯದಿಂದ ನೊಂದಿರುವವರಿಂದ ವೈಯಕ್ತಿಕವಾಗಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದೇನೆ. ಅಗತ್ಯವಿದ್ದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕರೆದು ವಿಚಾರಣೆಗೊಳಪಡಿಸಲಾಗುವುದು ಎಂದು ಮಂಜುಳಾ ಮಾನಸಾ ಹೇಳಿದರು. ಗ್ರಾಮಸ್ಥರಿಗೆ ತಮ್ಮ ಮೇಲೆ ಯಾರು ಹಲ್ಲೆ ನಡೆಸಿದ್ದಾರೆ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರೆಂದು ಮಾತ್ರ ಹೇಳಿಕೆ ನೀಡುತ್ತಿದ್ದಾರೆ. ಆದುದರಿಂದ, ಈ ಬಗ್ಗೆ ಸಮಗ್ರವಾದ ತನಿಖೆಯಾಗಲೇಬೇಕು. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ನಾಲಾಯಕ್ ಎಂದು ಅವರು ಕಿಡಿಕಾರಿದರು.
ಗ್ರಾಮದಲ್ಲಿನ ಎಲ್ಲ ಮನೆಗಳಿಗೆ ಭೇಟಿ ನೀಡಿದ ಮಂಜುಳಾ ಮಾನಸಾ, ದೌರ್ಜನ್ಯಕ್ಕೆ ಒಳಗಾದವರಿಂದ ಮಾಹಿತಿಗಳನ್ನು ಸಂಗ್ರಹಿಸಿದರು. ನೊಂದವರು ತಮ್ಮ ನೋವುಗಳನ್ನು ತೋಡಿಕೊಳ್ಳಲು ಮುಗಿಬಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ರೈತ ಮುಖಂಡರು, ಕನ್ನಡಪರ ಸಂಘಟನೆಗಳ ನಾಯಕರು ಅವರಿಗೆ ಸಾಥ್ ನೀಡಿದರು.
ತಹಶೀಲ್ದಾರ್‌ಗೆ ತರಾಟೆ: ಮಂಜುಳಾ ಮಾನಸಾ ಅವರೊಂದಿಗೆ ಯಮನೂರು ಗ್ರಾಮಕ್ಕೆ ಆಗಮಿಸಿದ ನವಲಗುಂದ ತಾಲೂಕಿನ ತಹಶೀಲ್ದಾರ್ ನವೀನ್ ಹುಲ್ಲೂರ್‌ರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಘಟನೆ ನಡೆದು ಇಷ್ಟು ದಿನಗಳಾದರೂ ಈವರೆಗೆ ನೀವು ಯಾಕೆ ಗ್ರಾಮಕ್ಕೆ ಭೇಟಿ ನೀಡಲಿಲ್ಲ. ಸರಕಾರಕ್ಕೆ ನೀವು ಯಾವ ರೀತಿಯ ವರದಿಯನ್ನು ನೀಡುತ್ತೀರಾ ಎಂಬುದು ನಮಗೆ ಗೊತ್ತಿದೆ. ಪೊಲೀಸರ ಪರವಾಗಿಯೆ ನೀವು ವರದಿ ನೀಡುವುದು ಎಂದು ತಹಶೀಲ್ದಾರ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರನ್ನು ಸಮಾಧಾನಪಡಿಸಲು ವಿಫಲರಾದ ನವೀನ್ ಹುಲ್ಲೂರ್, ಗ್ರಾಮದಿಂದ ಹೊರಬಂದು ತಮ್ಮ ವಾಹನದಲ್ಲಿ ತಾಲೂಕು ಕೇಂದ್ರದತ್ತ ತೆರಳಿದರು.







