ರೈತರ ಪರವಾಗಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ
ಮಾನ್ಯರೆ,
ಕಳಸಾ-ಬಂಡೂರಿ ಯೋಜನೆಯು ಉತ್ತರ ಕರ್ನಾಟಕದ ನೂರಾರು ಹಳ್ಳಿಗಳ ಕುಡಿಯುವ ನೀರಿಗೆ ಪರಿಹಾರ ಕಲ್ಪಿಸುವ ಯೋಜನೆಯಾಗಿದ್ದು, ಮಹಾದಾಯಿ ನದಿಯಿಂದ ರಾಜ್ಯದ ಪಾಲಿನ ನೀರನ್ನು ಕೊಡುವಂತೆ ನ್ಯಾಯಾಧಿಕರಣದ ಮುಂದೆ ಕೇಳುತ್ತಿದೆ. ಆದರೆ ಮಧ್ಯಾಂತರ ತೀರ್ಪು ರಾಜ್ಯದ ವಿರುದ್ಧವಾಗಿ ಬಂದಿದ್ದು, ಉತ್ತರ ಕರ್ನಾಟಕ ಭಾಗದ ರೈತರು ಕಂಗಾಲಾಗಿದ್ದಾರೆ. ಅವರು ಚಳವಳಿಯ ದಾರಿ ಹಿಡಿದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಕೆಲವೆಡೆ ರೈತರು ಹಲ್ಲೆಗೊಳಗಾಗಿದ್ದು, ಇನ್ನು ಕೆಲವರು ಜೈಲಿಗೂ ಹೋಗಿದ್ದಾರೆ.
ಸರಕಾರ ಈ ಪರಿಸ್ಥಿತಿಯನ್ನು ಮೊದಲೇ ಊಹಿಸಿ ಕ್ರಮ ಕೈಗೊಂಡಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲ್ಲಿಲ್ಲ. ಮಧ್ಯಾಂತರ ತೀರ್ಪಿನಲ್ಲಿ ರಾಜ್ಯದ ಪರವಾಗಿ ತೀರ್ಪು ಬರಲು ರಾಜ್ಯದ ಕಾನೂನು ತಜ್ಞರು ವಿಫಲರಾದದ್ದು ಹೇಗೆ?
ಇನ್ನಾದರೂ ಸರಕಾರ ಮತ್ತು ವಿರೋಧ ಪಕ್ಷದ ಮುಖಂಡರು ಕಳಸಾ-ಬಂಡೂರಿಯ ವಿಷಯದಲ್ಲಿ ರಾಜಕೀಯ ಮಾಡದೆ ರಾಜ್ಯದ ರೈತರ ಪರವಾಗಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ. ತೀರ್ಪು ನಮ್ಮ ಪರವಾಗಿ ಬರಲು ಪರಿಣಾಮಕಾರಿ ಕಾರ್ಯತಂತ್ರ ರೂಪಿಸಬೇಕಾಗಿದೆ.
Next Story





