ಹಣ ಹಿಂದೆ ಪಡೆಯುವ ಯತ್ನದಲ್ಲಿ ಫಿಲಿಪ್ಪೀನ್ಸ್‌ಗೆ ಹೊರಟ ಬಾಂಗ್ಲಾ ತಂಡ
ಬಾಂಗ್ಲಾದೇಶ ಸೆಂಟ್ರಲ್ ಬ್ಯಾಂಕ್ ಖಾತೆಗೆ ಕನ್ನ ಪ್ರಕರಣ
ಢಾಕಾ, ಆ. 2: ನ್ಯೂಯಾರ್ಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್‌ನಲ್ಲಿರುವ ಬಾಂಗ್ಲಾದೇಶ ಸೆಂಟ್ರಲ್ ಬ್ಯಾಂಕ್‌ನ ಖಾತೆಯಿಂದ ಕಳವಾಗಿರುವ ಹಣವನ್ನು ಹಿಂದಿರುಗಿಸಲು ಏನಾದರೂ ವಿಧಾನವನ್ನು ಹುಡುಕುವಂತೆ ಫಿಲಿಪ್ಪೀನ್ಸ್ ಅಧಿಕಾರಿಗಳನ್ನು ಒತ್ತಾಯಿಸಲು ಬಾಂಗ್ಲಾದೇಶ ಸೆಂಟ್ರಲ್ ಬ್ಯಾಂಕ್‌ನ ಅಧಿಕಾರಿಗಳು ಈ ವಾರ ಮನಿಲಾಕ್ಕೆ ಭೇಟಿ ನೀಡಲಿದ್ದಾರೆ.
ಅಜ್ಞಾತ ಸೈಬರ್ ಅಪರಾಧಿಗಳು ಬಾಂಗ್ಲಾದೇಶ ಬ್ಯಾಂಕ್‌ನ ಖಾತೆಯಿಂದ ಫೆಬ್ರವರಿ 4 ಮತ್ತು 5ರ ನಡುವೆ ಸುಮಾರು 1 ಬಿಲಿಯ ಡಾಲರ್ (ಸುಮಾರು 6,790 ಕೋಟಿ ರೂಪಾಯಿ) ಮೊತ್ತವನ್ನು ಕದಿಯಲು ಯೋಜನೆ ರೂಪಿಸಿದ್ದರು. ಆ ಪೈಕಿ ಮನಿಲಾದಲ್ಲಿರುವ ರೈಝಲ್ ಕಮರ್ಶಿಯಲ್ ಬ್ಯಾಂಕಿಂಗ್ ಕಾರ್ಪ್ (ಆರ್‌ಸಿಬಿಸಿ)ನಲ್ಲಿರುವ ನಾಲ್ಕು ಖಾತೆಗಳಿಗೆ 81 ಮಿಲಿಯ ಡಾಲರ್ (ಸುಮಾರು 550 ಕೋಟಿ ರೂಪಾಯಿ) ಮೊತ್ತವನ್ನು ವರ್ಗಾಯಿಸುವಲ್ಲಿ ಯಶಸ್ವಿಯೂ ಆಗಿದ್ದರು. ಆ ಪೈಕಿ ಸುಮಾರು 18 ಮಿಲಿಯ ಡಾಲರ್ (ಸುಮಾರು 122 ಕೋಟಿ ರೂಪಾಯಿ) ಮೊತ್ತವನ್ನು ಮಾತ್ರ ವಶಪಡಿಸಿಕೊಳ್ಳುವಲ್ಲಿ ಬ್ಯಾಂಕ್ ಅಧಿಕಾರಿಗಳು ಈವರೆಗೆ ಯಶಸ್ವಿಯಾಗಿದ್ದಾರೆ. 63 ಮಿಲಿಯ ಡಾಲರ್ (ಸುಮಾರು 428 ಕೋಟಿ ರೂಪಾಯಿ) ಮೊತ್ತ ಈಗಲೂ ನಾಪತ್ತೆಯಾಗಿದೆ.
ಫಿಲಿಪ್ಪೀನ್ಸ್‌ನಲ್ಲಿರುವ ಜುಗಾರಿ ಅಡ್ಡೆಗಳಿಗೆ ಈ ಹಣ ಹರಿದುಹೋಗಲು ಅವಕಾಶ ನೀಡಲಾಗಿದೆ ಎಂದು ಬಾಂಗ್ಲಾದೇಶಿ ಅಧಿಕಾರಿಗಳು ಆರೋಪಿಸಿದ್ದಾರೆ. ಅದೇ ವೇಳೆ, ಆರ್‌ಸಿಬಿಸಿಯಲ್ಲಿರುವ ಸಾಂಸ್ಥಿಕ ವೈಫಲ್ಯಗಳಿಂದಾಗಿ ಆ ಹಣ ಈಗ ಬಿಳಿಯಾಗಿದೆ ಎಂದು ಫಿಲಿಪ್ಪೀನ್ಸ್‌ನ ತನಿಖಾಧಿಕಾರಿಗಳು ಹೇಳುತ್ತಾರೆ ಎಂದು ಬಾಂಗ್ಲಾದೇಶ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಫೆಬ್ರವರಿ 5ರಂದು ಆರ್‌ಸಿಬಿಸಿಯ ಮನಿಲಾದ ಜುಪಿಟರ್ ಸ್ಟ್ರೀಟ್ ಶಾಖೆಯಲ್ಲಿರುವ ಖಾತೆಗಳಿಗೆ ಹಣ ವರ್ಗಾವಣೆಯಾದಾಗ, ಬ್ಯಾಂಕ್‌ನ ಪ್ರಧಾನ ಕಚೇರಿಯ ಅಧಿಕಾರಿಗಳ ಸಂಶಯ ವ್ಯಕ್ತಪಡಿಸಿದ್ದರೂ ಶಾಖೆ ಅದನ್ನು ಉಪೇಕ್ಷಿಸಿತ್ತು. ಈ ಕುರಿತು ಆರ್‌ಸಿಬಿಸಿಯಲ್ಲಿರುವ ದಾಖಲೆಗಳನ್ನೇ ಈಗ ಬಾಂಗ್ಲಾದೇಶ ಬ್ಯಾಂಕ್‌ನ ಅಧಿಕಾರಿಗಳು ಅವಲಂಬಿಸಿದ್ದಾರೆ. ಬಳಿಕ, ಈ ಹಣವನ್ನು ಮುಟ್ಟುಗೋಲು ಹಾಕುವಂತೆ ಫೆಬ್ರವರಿ 9ರಂದು ಆರ್‌ಸಿಬಿಸಿ ಮಾಡಿದ ಮನವಿಗಳಿಗೆ ವಿಳಂಬವಾಗಿ ಪ್ರತಿಕ್ರಿಯಿಸಲಾಗಿತ್ತು.
ಬಾಂಗ್ಲಾದೇಶದ ನಿಯೋಗವು ಮನಿಲಾದಲ್ಲಿರುವ ಅಕ್ರಮ ಹಣವನ್ನು ಸಕ್ರಮಗೊಳಿಸುವುದನ್ನು ನಿರ್ಬಂಧಿಸುವ ಸಮಿತಿ, ಫಿಲಿಪ್ಪೀನ್ಸ್‌ನ ಕಾನೂನು ಇಲಾಖೆ, ಸೆಂಟ್ರಲ್ ಬ್ಯಾಂಕ್ ಆಫ್ ಫಿಲಿಪ್ಪೀನ್ಸ್ ಮತ್ತು ಆರ್‌ಸಿಬಿಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.







