ಬಾಡಿಗೆ ನೆಪದಲ್ಲಿ ಕರೆದೊಯ್ದು ಚಾಲಕನಿಗೆ ಹಲ್ಲೆ: ಕಾರು ಕಳವು
ಉಡುಪಿ, ಆ.2: ಬಾಡಿಗೆ ನೆಪದಲ್ಲಿ ಕರೆದೊಯ್ದು ಚಾಲಕನಿಗೆ ಹಲ್ಲೆ ನಡೆಸಿ ಕಾರನ್ನು ಕಳವು ಮಾಡಿರುವ ಘಟನೆ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ 3:30ರ ಸುಮಾರಿಗೆ ನಡೆದಿದೆ.
ಮಣಿಪಾಲ ರಾಜೀವ ನಗರದ ನಿವಾಸಿ ಶಂಕರ ಆಚಾರ್ಯ(48) ಎಂಬವರು ಹಲ್ಲೆಗೆ ಒಳಗಾಗಿ ಕಾರು ಕಳೆದು ಕೊಂಡವರು. ಹಲ್ಲೆಯಿಂದ ತಲೆಗೆ ಗಾಯಗೊಂಡಿರುವ ಶಂಕರ ಆಚಾರ್ಯ ಕೊಪ್ಪಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಆ.1ರಂದು ಸಂಜೆ 6 ಗಂಟೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಸಮೀಪ ಇರುವ ಟ್ಯಾಕ್ಸಿ ನಿಲ್ದಾಣಕ್ಕೆ ಬಂದ ಯುವಕರಿಬ್ಬರು ಶಂಕರ ಆಚಾರ್ಯರ ಕಾರನ್ನು ರಾಯಚೂರು ಸಮೀಪದ ಲಿಂಗಸೂರು ಎಂಬಲ್ಲಿಗೆ ಹೋಗಲು ಬಾಡಿಗೆಗೆ ಗೊತ್ತು ಮಾಡಿದ್ದರು ಎಂದುಙೇಳಲಾಗಿದೆ. ಉಡುಪಿ ಸಿಟಿಬಸ್ ನಿಲ್ದಾಣದ ಬಳಿ ಮತ್ತೆ ಇಬ್ಬರು ಯುವಕರನ್ನು ಕಾರಿಗೆ ಹತ್ತಿಸಿಕೊಂಡರು. ಇವರೆ ಲ್ಲರು 20-22ವರ್ಷ ಪ್ರಾಯ ದವರಾಗಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ನಸುಕಿನ ವೇಳೆ 3:30ಕ್ಕೆ ಕೊಪ್ಪಳ-ಕುಷ್ಠಗಿ ರಸ್ತೆ ಮಧ್ಯೆ ಸಾಗುತ್ತಿದ್ದಾಗ ವಾಂತಿ ಬರುವುದಾಗಿ ಹೇಳಿ ಕಾರನ್ನು ನಿಲ್ಲಿಸಲು ಯುವಕರು ಶಂಕರ ಆಚಾರ್ಯರಲ್ಲಿ ಸೂಚಿಸಿದ್ದಾರೆ. ಅದರಂತೆ ಅವರು ಕಾರನ್ನು ನಿಲ್ಲಿಸಿದ್ದು ಆ ಸಂದರ್ಭ ಕಾರಿನಿಂದ ಇಳಿದ ಯುವಕರು ಶಂಕರ ಆಚಾರ್ಯರಿಗೆ ತೀವ್ರವಾಗಿ ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ.
ಬಳಿಕ ಅವರ ಪ್ಯಾಂಟ್ ಕಿಸೆಯಲ್ಲಿದ್ದ ಪರ್ಸ್ ಹಾಗೂ ಮೊಬೈಲ್‌ನ್ನು ಕಿತ್ತು, ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ನಂತರ 4ಗಂಟೆ ಸುಮಾರಿಗೆ ಹಲ್ಲೆಗೆ ಒಳಗಾದ ಶಂಕರ ಆಚಾರ್ಯರು ಅದೇ ರಸ್ತೆಯಲ್ಲಿ ಬರುತ್ತಿದ್ದ ಹಾಲಿನ ಟೆಂಪೊವನ್ನು ನಿಲ್ಲಿಸಿ ಅವರ ಸಹಾಯದಿಂದ ಕೊಪ್ಪಳ ಪೊಲೀಸ್‌ಠಾಣೆ ತಲುಪಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡಲೇ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು. ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು ಶಂಕರ ಆಚಾರ್ಯರನ್ನು ಅಲ್ಲೇ ಉಳಿಸಿಕೊಂಡಿದ್ದಾರೆ. ಈವರೆಗೆ ಕಾರಿನ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.





