ಸ್ಫೋಟ ಪ್ರಕರಣ: ಮೈಸೂರಲ್ಲಿ ಬೀಡುಬಿಟ್ಟ ತನಿಖಾ ತಂಡಗಳು

ಮೈಸೂರು, ಆ.2: ಸೋಮವಾರ ನಗರದ ಜಿಲ್ಲಾ ನ್ಯಾಯಾಲಯದ ಸಾರ್ವಜನಿಕ ಶೌಚಾಲಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿದ್ದು ಕರ್ನಾಟಕ, ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳ ತನಿಖಾ ತಂಡಗಳು ಮೈಸೂರಿಗೆ ಆಗಮಿಸಿ ತನಿಖೆ ನಡೆಸುತ್ತಿವೆ.
ಸ್ಫೋಟದ ಹಿಂದಿನ ರೂವಾರಿಗಳ ಕುರಿತು ಯಾವುದೇ ಸುಳಿವು ದೊರಕದಿದ್ದರೂ, ಸ್ಫೋಟಕ್ಕೆ ಬಳಸಿರುವುದು ಪ್ರೆಶರ್ ಕುಕರ್ ಬಾಂಬ್ ಎನ್ನುವುದನ್ನು ಪ್ರಾಥಮಿಕ ತನಿಖೆಯಿಂದ ಪೊಲೀಸರು ಖಚಿತ ಪಡಿಸಿದ್ದಾರೆ. ಇನ್ನು ಇಡೀ ದಿನ ರಾಷ್ಟ್ರೀಯ ತನಿಖಾ ತಂಡ, ಭಯೋತ್ಪಾದನೆ ನಿಗ್ರಹ ದಳದ ಸಿಬ್ಬಂದಿ ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ಕೈಗೊಂಡು ಮಹತ್ವದ ಸುಳಿವುಗಳನ್ನು ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ದಿಲ್ಲಿಯಿಂದ ಐಬಿ ಹಾಗೂ ಎಟಿಎಸ್, ಎನ್‌ಐಎ ತಂಡಗಳು, ಬಾಂಬ್ ನಿಷ್ಕ್ರಿಯ ದಳ ಮೈಸೂರಿಗೆ ಆಗಮಿಸಿ ಬಾಂಬ್ ಸ್ಫೋಟಗೊಂಡ ಜಿಲ್ಲಾ ನ್ಯಾಯಾಲಯದ ಒಳ ಆವರಣ ಮತ್ತು ಹೊರ ಆವರಣಗಳನ್ನು ಪರಿಶೀಲಿಸಿದ್ದು ಘಟನೆ ನಡೆದ ನೂರು ಮೀಟರ್ ವ್ಯಾಪ್ತಿಯಲ್ಲಿರುವ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ಮೊಳೆ, ಇಲೆಕ್ಟ್ರಿಕಲ್ ವೈರ್‌ಗಳ ತುಂಡು, ಕಬ್ಬಿಣದ ತುಂಡುಗಳು ಪತ್ತೆಯಾಗಿವೆ.
ಅಷ್ಟೇ ಅಲ್ಲದೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಪೊಲೀಸರು ಮೈಸೂರಿಗೆ ಆಗಮಿಸಿದ್ದು, ನಾಲ್ಕು ರಾಜ್ಯಗಳಲ್ಲಿ ಈ ಹಿಂದೆ ನಡೆದ ಬಾಂಬ್ ಸ್ಫೋಟಗಳು ಹಾಗೂ ಸಾಮ್ಯತೆಯನ್ನು ಪರಿಶೀಲಿಸಿದರು. ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಸಮೀಪವಿರುವ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ಪೊಲೀಸರು ದಿನವಿಡೀ ಪರಿಶೀಲನೆ ನಡೆಸಿದರು. ಈ ವೇಳೆ ಕಣ್ಣಿಗೆ ಬಿದ್ದ ಕೆಲವು ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆದರು. ಕೆಲ ವೈರ್‌ಗಳ ತುಂಡುಗಳು, ಕಬ್ಬಿಣದ ಮೊಳೆಗಳು ಸೇರಿದಂತೆ 15ಕ್ಕೂ ಹೆಚ್ಚಿನ ವಸ್ತುಗಳನ್ನು ಬಾಂಬ್ ಪತ್ತೆ ದಳದ ಸಿಬ್ಬಂದಿ ಸಂಗ್ರಹಿಸಿದರು.
ಅದೇ ರೀತಿ ಬಿಡಿಡಿಎಸ್ ಬಾಂಬ್ ಪತ್ತೆದಳ ಸಿಬ್ಬಂದಿಯೂ ಕೆಲಹೊತು ರೈಲು ನಿಲ್ದಾಣದಲ್ಲಿ ತೀವ್ರ ಶೋಧ ನಡೆಸಿದರು. ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ಸ್ಫೋಟಕ ವಸ್ತುಗಳನ್ನು ಅಡಗಿಸಿಟ್ಟಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಹಾಗೂ ಆಸುಪಾಸಿನ ಇಂಚಿಂಚೂ ಪ್ರದೇಶಗಳನ್ನು ತಪಾಸಣೆ ಮಾಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸೂಚನೆಯ ಮೇರೆಗೆ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿದ ಆಂತರಿಕ ಡಿಜಿಪಿ ನೀರಮಣಿ ಪಿ.ರಾಜು, ಸ್ಫೋಟ ಸಂಭವಿಸಿದ ಸ್ಥಳ ಪರಿಶೀಲಿಸಿದರು. ಅಲ್ಲದೆ ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಅಲ್ಲದೆ ತನಿಖೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಕೋರ್ಟ್‌ಗೆ ಭದ್ರತೆ: ಇದೀಗ ಜಿಲ್ಲಾ ನ್ಯಾಯಾ ಲಯಕ್ಕೆ ತಕ್ಷಣದಿಂದಲೇ ಸೂಕ್ತ ಭದ್ರತೆ ಒದಗಿಸಲಾಗಿದೆ. ಕೋರ್ಟ್‌ನ ಮುಖ್ಯದ್ವಾರಗಳಿಗೆ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿದ್ದು, ನ್ಯಾಯಾಲಯಕ್ಕೆ ಬರುವ ಪ್ರತಿಯೊಬ್ಬರನ್ನೂ, ಅವರ ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಶೀಘ್ರದಲ್ಲಿಯೇ ಕೋರ್ಟ್ ಆವರಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು.
ಕೋರ್ಟ್ ಕಲಾಪ ಬಹಿಷ್ಕಾರ: ಈನಡುವೆ, ನಿನ್ನೆಯ ಸ್ಫೋಟವನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘವು ಮಂಗಳವಾರ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿತು. ಬೆಳಗ್ಗೆ 11ಕ್ಕೆ ತುರ್ತು ಸರ್ವ ಸದಸ್ಯರ ಸಭೆ ಕರೆದ ಸಂಘದ ಅಧ್ಯಕ್ಷ ಚಂದ್ರವೌಳಿ, ಸೋಮವಾರ ನಡೆದ ಘಟನೆಯಿಂದ ವಕೀಲರಿಗೆ ಭದ್ರತೆ ಇಲ್ಲದಂತಾಗಿದ್ದು ಕೋರ್ಟ್ ಆವರಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಜಿಲ್ಲಾ ಕೋರ್ಟ್‌ನ ಹೊರ ಆವರಣದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಾಯಿತು. ಗುಪ್ತದಳ ಐಜಿಪಿ ಗುಪ್ತ ಸಭೆ: ಬಾಂಬ್ ಸ್ಫೋಟ ಸಂಭವಿಸಿದ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಗುಪ್ತದಳ ಐಜಿಪಿ ನೀಲಮಣಿ ಪಿ.ರಾಜು ಅವರು, ಘಟನೆ ನಡೆದ ಸ್ಥಳದ ಸಮೀಪವೇ ವಿವಿಧ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಡಿಸಿಪಿ ಶೇಖರ್ ಹಾಗೂ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ತಂಡಗಳೊಂದಿಗೆ ಸಮೀಪದ ನ್ಯಾಯಾಲಯದ ಕೊಠಡಿಯೊಂದರಲ್ಲಿ ಗೌಪ್ಯ ಸಭೆ ನಡೆಸಿದರು.
ರಾಸಾನಿಕ ವಸ್ತುಗಳನ್ನು ಪ್ರಯೋಗಾಲಯಕ್ಕೆ ರವಾನೆ: ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದ ಶೌಚಾಲಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಬಳಸಲಾಗಿರುವ ಕೆಲ ರಾಸಾಯನಿಕ ವಸ್ತುಗಳನ್ನು ಸೋಮವಾರ ಸಂಜೆಯಿಂದ ಪತ್ತೆ ಹಚ್ಚಿ ಸಂಗ್ರಹಿಸಲಾಗಿದೆ. ಹೆಚ್ಚಿನ ತನಿಖೆಗೆ ಪತ್ತೆಹಚ್ಚಲಾಗಿರುವ ಕೆಲ ವಸ್ತುಗಳನ್ನು ಬೆಂಗಳೂರು ಹಾಗೂ ಹೈದರಾಬಾದಿನ ಪ್ರಯೋಗಾಲಯಗಳಿಗೆ ಕಳುಹಿಸಿಲಾಗಿದ್ದು. ಆದಷ್ಟು ಬೇಗ ವರದಿ ನೀಡುವಂತೆ ಕೋರಲಾಗಿದೆ.







