ಈ ಎನ್‌ಆರ್‌ಐಗಳ ಕಡೆಗೂ ಗಮನವಿರಲಿ

ಸದಾ ವಿದೇಶಗಳಲ್ಲೇ ಓಡಾಡುತ್ತಾ ಎನ್‌ಆರ್‌ಐಗಳ ಸಮಾವೇಶದಲ್ಲಿ ತನ್ನನ್ನು ತಾನೇ ವೈಭವೀಕರಿಸಿಕೊಳ್ಳುವ ನರೇಂದ್ರ ಮೋದಿಗೆ, ಎನ್‌ಆರ್‌ಐಗಳು ಎಂದರೆ ಅಲ್ಲಿರುವ ಕೋಟ್ಯಧಿಪತಿಗಳು ಮಾತ್ರ. ಅವರ ಸಮಾವೇಶಗಳಲ್ಲಿ ಭಾಗವಹಿಸುವ ಎನ್‌ಆರ್‌ಐಗಳಿಗೆ ಕೆಲವು ಮುಖ್ಯ ಅರ್ಹತೆಗಳು ಇರಬೇಕು. ಅವರು ಹಣವಂತರಾಗಿರುವುದು ಮತ್ತು ಕೋಟು ಬೂಟು ಗಳನ್ನು ಹೊಂದಿರುವುದು ಅತ್ಯಗತ್ಯ. ಈ ಸಮಾಗಮದ ಹಿತಾಸಕ್ತಿಗೆ ಪೂರಕವಾಗಿ ಮಾಧ್ಯಮಗಳೂ ವರದಿ ಮಾಡುತ್ತಿವೆ. ಅನಿವಾಸಿ ಭಾರತೀಯರು ಹೇಗೆ ನರೇಂದ್ರ ಮೋದಿಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಬಣ್ಣಿಸಲು ಸ್ಪರ್ಧೆ ನಡೆಸುತ್ತಿವೆ. ಭಾರತವನ್ನು ಸಂಪೂರ್ಣ ತೊರೆದು ಮಾನಸಿಕವಾಗಿ ವಿದೇಶಿಯರಾಗಿಯೇ ಬದುಕುತ್ತಿರುವ ಇವರು, ಹೊರಗೆ ನಿಂತು ಭಾರತವನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ನಮ್ಮ ಪ್ರಧಾನಿಯನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ತಾಳಕ್ಕೆ ಕುಣಿಯುವವರೆಗೆ ನರೇಂದ್ರ ಮೋದಿ ಅವರಿಗೆ ಇಷ್ಟವಾಗುವುದರಲ್ಲಿ ಯಾವ ಅಡ್ಡಿಯೂ ಇರುವುದಿಲ್ಲ.
ಆದರೆ ಎನ್‌ಆರ್‌ಐಗಳು ಎಂದರೆ ಕೇವಲ ಈ ಉದ್ಯಮಿಗಳಷ್ಟೇ ಅಲ್ಲ. ತುತ್ತು ಅನ್ನವನ್ನು ಹುಡುಕುತ್ತಾ ವಿದೇಶವನ್ನು ಸೇರಿ ಅಲ್ಲಿ ಕಾರ್ಮಿಕರಾಗಿ ತಮ್ಮ ಬದುಕನ್ನು ಸವೆಸಿ, ಭಾರತಕ್ಕೆ ಹಣ ಕಳುಹಿಸುವ, ಭಾರತದ ಬಡತನವನ್ನು ಇಲ್ಲವಾಗಿಸಲು ಶ್ರಮಿಸುವ ಒಂದು ದೊಡ್ಡ ಸಂಖ್ಯೆ ವಿದೇಶಗಳಲ್ಲಿವೆ. ಇಂದು ಭಾರತ ಒಂದಿಷ್ಟು ಆರ್ಥಿಕವಾಗಿ ಉಸಿರು ಬಿಡುತ್ತಿದ್ದರೆ ಇವರ ದುಡಿತದ ಹಣವೂ ಅದಕ್ಕೆ ಕಾರಣವಾಗಿದೆ. ಇಂತಹ ವರ್ಗ ಅಮೆರಿಕ, ಸೌದಿ, ದುಬೈ ಹೀಗೆ ವಿಶ್ವಾದ್ಯಂತ ಹರಡಿಕೊಂಡಿವೆ. ಅವರು ಮೋದಿಯ ಸಮಾವೇಶಕ್ಕೆ ಬರಲಾರರು. ಆದರೆ ಸದಾ ತಮ್ಮ ತಾಯ್ನೆಲವನ್ನು ನೆನೆಸುತ್ತಾ, ಸಂಕಟಪಡುತ್ತಾ ಅಲ್ಲಿ ಶ್ರಮದ ಕೆಲಸಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ವಿದೇಶ ಪ್ರಯಾಣದಲ್ಲೇ ಕಳೆಯುತ್ತಿರುವ ನರೇಂದ್ರ ಮೋದಿಯವರು ಈ ವರ್ಗದ ಕುರಿತಂತೆ ವಿದೇಶಗಳಲ್ಲಿ ಮಾತನಾಡಿದ, ಇವರಿಗೆ ಸ್ಪಂದಿಸಿದ ಉದಾಹರಣೆಯೇ ಇಲ್ಲ. ಇತ್ತೀಚೆಗೆ ಕೊಲ್ಲಿ ರಾಷ್ಟ್ರಕ್ಕೆ ಮೋದಿ ತೆರಳಿದಾಗ ಅವರಿಗೆ ಭವ್ಯ ಸ್ವಾಗತವನ್ನು ಆ ದೇಶ ನೀಡಿತು ಎಂದು ಮಾಧ್ಯಮಗಳಲ್ಲಿ ವರದಿಯಾದವು. ಆದರೆ ಈ ಭೇಟಿ ಯಾವ ರೀತಿಯಲ್ಲೂ ಭಾರತ ಮೂಲದ ಕಾರ್ಮಿಕರಿಗೆ ಪ್ರಯೋಜನವಾಗಿಲ್ಲ ಎನ್ನುವುದನ್ನು ಸೌದಿ ಅರೇಬಿಯದಲ್ಲಿ ಉದ್ಯೋಗ ಕಳೆದು ಕೊಂಡು ಬೀದಿ ಪಾಲಾಗಿರುವ ಸಾವಿರಾರು ಜನರು ಹೇಳುತ್ತಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಇನ್ನೊಂದು ಸಂತಸದ ವಿಷಯವೆಂದರೆ, ಸುಷ್ಮಾ ಸ್ವರಾಜ್ ತನ್ನ ಖಾತೆಯನ್ನು ಬಳಸಿಕೊಂಡು ಇವರ ಕಷ್ಟಗಳಿಗೆ ತೀವ್ರ ರೀತಿಯಲ್ಲಿ ಸ್ಪಂದಿಸಿರುವುದು. ನರೇಂದ್ರ ಮೋದಿಯ ಪ್ರಹಸನಗಳ ನಡುವೆ ಸುಷ್ಮಾ ಸ್ವರಾಜ್ ಅವರ ಈ ಕಿರು ಕಾರ್ಯ ಅಲ್ಲಿನ ಕಾರ್ಮಿಕರಿಗೆ ಒಂದಿಷ್ಟು ನಿರಾಳತೆಯನ್ನು ತಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತದ ಆರ್ಥಿಕತೆಯ ಏಳು ಬೀಳುಗಳಲ್ಲಿ ಸೌದಿ ಅರೇಬಿಯ ಸಂಬಂಧ ತಳಕು ಹಾಕಿಕೊಂಡಿದೆ ಎನ್ನುವುದು ನಮಗೆ ಗೊತ್ತಿರುವ ಸಂಗತಿಯಾಗಿದೆ. 80ರ ದಶಕದಾಚೆಗೆ ದಕ್ಷಿಣ ಭಾರತದ ಬಹುದೊಡ್ಡ ಸಂಖ್ಯೆಯ ಜನರು ಈ ಸೌದಿಯ ದೆಸೆಯಿಂದಲೇ ಆರ್ಥಿಕವಾಗಿ ಚೇತರಿಕೆ ಕಂಡರು. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರ ಆರ್ಥಿಕ ಸುಧಾರಣೆಯಲ್ಲಿ ಸೌದಿ, ದುಬೈಯ ಪಾತ್ರ ಬಹುದೊಡ್ಡದಿದೆ. ಹಾಗೆಯೇ ಯಾವ ರೀತಿಯಲ್ಲೂ ಧಾರ್ಮಿಕ ಭೇದ ಮಾಡದೆ ಎಲ್ಲ ವರ್ಗದ ಕಾರ್ಮಿಕರನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಅವರ ಬದುಕನ್ನು ಹಸನುಗೊಳಿಸಿವೆ. ಕೊಲ್ಲಿ ರಾಷ್ಟ್ರಗಳು. ಆದರೆ ಇತ್ತೀಚಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಕಾರ್ಮಿಕರ ಸ್ಥಿತಿ ಬೇರೆ ಬೇರೆ ಕಾರಣಗಳಿಗಾಗಿ ಬಿಗಡಾಯಿಸಿದೆ. ಆರಂಭದಲ್ಲಿ ನಿತಾಕತ್ ಕಾನೂನಿಂದಾಗಿ ಸಾವಿರಾರು ಜನರು ಏಕಾಏಕಿ ಬೀದಿಗೆ ಬಿದ್ದರು. ಇದೀಗ ತೈಲ ದರದ ಏರು ಪೇರುಗಳು ಇನ್ನಷ್ಟು ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೊಲ್ಲಿ ರಾಷ್ಟ್ರಗಳು ತಮ್ಮ ಜನರ ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಹಜವಾಗಿದೆ. ಪರಿಣಾಮವಾಗಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇತ್ತ ಭಾರತಕ್ಕೂ ಬರಲಾಗದೆ, ಅತ್ತ ಆ ದೇಶದಲ್ಲೂ ಉಳಿಯಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಸಮಯದಲ್ಲೇ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ವಿದೇಶಾಂಗ ಸಚಿವಾಲಯ ತಂಡ ಅವರ ನೆರವಿಗೆ ಧಾವಿಸಿದ್ದು ಒಂದಿಷ್ಟಾದರೂ ಅವರ ಆತಂಕವನ್ನು ದೂರ ಮಾಡಿದೆ. ಸ್ವರಾಜ್ ಈ ಬಗ್ಗೆ ಟ್ವೀಟ್ ಮಾಡಿ, ಸೌದಿಯಲ್ಲಿರುವ 30 ಲಕ್ಷ ಭಾರತೀಯರ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ. ರಾಜ್ಯ ಸಚಿವರಾದ ವಿ.ಕೆ.ಸಿಂಗ್ ಹಾಗೂ ಎಂ.ಜೆ.ಅಕ್ಬರ್ ಅವರು, ಸೌದಿ ಅರೇಬಿಯ ಹಾಗೂ ಕುವೈಟ್‌ನಲ್ಲಿ ಉದ್ಭವಿಸಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಭಾರತೀಯರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಸಮಸ್ಯೆ ಇಲ್ಲಿಗೇ ಮುಗಿಯುವುದಿಲ್ಲ ಎನ್ನುವ ಅರಿವು ನಮ್ಮ ವಿದೇಶಾಂಗ ಸಚಿವಾಲಯಕ್ಕೆ ಇರಬೇಕಾಗಿದೆ. ಇದೊಂದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಪಶ್ಚಿಮ ಏಷ್ಯಾ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಬಹಳಷ್ಟು ಮಂದಿ ಭಾರತೀಯರು ಸ್ವದೇಶಕ್ಕೆ ವಾಪಸಾಗುವ ಸಾಧ್ಯತೆ ಇದೆ. ತೈಲ ಬೆಲೆ ಕುಸಿತ ಹಾಗೂ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳುವಂತೆ ಹಲವು ದೇಶಗಳು ನೀತಿ ರೂಪಿಸಿರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ಅನಿವಾಸಿ ಭಾರತೀಯರು ಈ ದೇಶಗಳಿಂದ ವಾಪಸಾಗುವ ಸಾಧ್ಯತೆ ಇದೆ. ಇದು ಸಾಕಷ್ಟು ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮವನ್ನೂ ಬೀರಲಿದ್ದು, ಇದನ್ನು ನಿರ್ವಹಿಸಲು ಭಾರತ ಸಜ್ಜಾಗಿಲ್ಲ. ನರೇಂದ್ರ ಮೋದಿಯ ಭಾಷಣ ವಿದೇಶಗಳಲ್ಲಿ ಯಾವುದೇ ರೀತಿಯ ಪರಿಣಾಮವನ್ನೂ ಬೀರಿಲ್ಲ. ಅವರ ಭೇಟಿಯ ಬಳಿಕ ಪರಿಸ್ಥಿತಿ ಇನ್ನಷ್ಟು ಅಯೋಮಯವಾಗಿದೆಯೇ ಹೊರತು, ಅನಿವಾಸಿಗಳ ಬದುಕು ಸುಗಮವಾಗಿಲ್ಲ. ಭವಿಷ್ಯದ ಬಿಕ್ಕಟ್ಟಿನಿಂದಾಗಿ ಭಾರತ ಎರಡು ಆತಂಕಗಳನ್ನು ಎದುರಿಸಬೇಕಾಗುತ್ತದೆ.
ಒಂದು, ಈವರೆಗೆ ವಿದೇಶಗಳಲ್ಲಿ ನಮ್ಮ ಕಾರ್ಮಿಕರ ಶ್ರಮದಿಂದ ಬರುತ್ತಿದ್ದ ಹಣದ ಪ್ರಮಾಣ ಕುಸಿಯಲಿದೆ. ವಿದೇಶಿ ವಿನಿಮಯದ ಮೇಲೆಯೂ ಇದು ಪರಿಣಾಮ ಬೀರಲಿದೆ. ಹಾಗೆಯೇ, ಈ ಪ್ರಮಾಣ ಕುಸಿತಗೊಂಡಂತೆ, ಭಾರತದ ಸಾಮಾಜಿಕ, ಆರ್ಥಿಕಮಟ್ಟವೂ ಕುಸಿಯಲಿದೆ. ಹಾಗೆಯೇ ನಿರುದ್ಯೋಗಿಗಳಾಗಿ ಮರಳಿ ಬಂದವರಿಗೆ ಕೊಡಲು ನಮ್ಮ ಬಳಿ ಏನಿದೆ? ಇರುವವರಿಗೇ ಸರಿಯಾದ ಉದ್ಯೋಗಗಳಿಲ್ಲ. ಹೀಗಿರುವಾಗ, ಬಂದವರಿಗೆ ಉದ್ಯೋಗಗಳನ್ನು ಸರಕಾರ ಹೇಗೆ ಒದಗಿಸುತ್ತದೆ ಎನ್ನುವ ಪ್ರಶ್ನೆಯನ್ನು ಎದುರಿಸಲು ಸರಕಾರ ಈಗಲೇ ಸಿದ್ಧತೆ ನಡೆಸಬೇಕಾಗಿದೆ. ಹಾಗೆಯೇ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಜನರು ವಿದೇಶಗಳ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇವರನ್ನು ಬಿಡಿಸುವ ಮತ್ತು ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವ ಹೊಣೆಗಾರಿಕೆಯೂ ವಿದೇಶಾಂಗ ಸಚಿವಾಲಯಕ್ಕೆ ಸೇರಿದೆ.
ಒಟ್ಟಿನಲ್ಲಿ ಕೊಲ್ಲಿ ರಾಷ್ಟ್ರಗಳ ಏರುಪೇರುಗಳನ್ನು ಸರಕಾರ ಗಂಭೀರವಾಗಿ ಸ್ವೀಕರಿಸಬೇಕಾಗಿದೆ. ಹಾಗೆಯೇ ವಿದೇಶಾಂಗ ನೀತಿಯಲ್ಲಿ ಬದಲಾವಣೆಗಳೂ ಅತ್ಯಗತ್ಯವಾಗಿದೆ. ಹೊಸ ಮಿತ್ರರ ಹುಡುಕಾಟ ಇಂದಿನ ಅಗತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಡುಗಾಟಿಕೆಯ ಪ್ರವಾಸಗಳಿಗೆ ವಿರಾಮ ಹೇಳಿ ಈ ವಿಷಯದ ಕಡೆಗೆ ಗಮನ ಹರಿಸಬೇಕಾಗಿದೆ. ಬರೇ ಕಾರ್ಪೊರೇಟ್ ಮಿತ್ರರನ್ನು ಶ್ರೀಮಂತಗೊಳಿಸುವುದರಿಂದ ದೇಶ ಉದ್ಧಾರವಾಗುವುದಿಲ್ಲ. ಅಭಿವೃದ್ಧಿ ತಳಸ್ತರದ ಜನರನ್ನು ತಲುಪಬೇಕು. ಈ ನಿಟ್ಟಿನಲ್ಲಿ ವಿದೇಶಗಳಲ್ಲಿರುವ ಭಾರತೀಯ ಮೂಲದ ಶ್ರಮ ಜೀವಿಗಳ ಬದುಕು ಹಳಿತಪ್ಪದಂತೆ ಕಾರ್ಯಕ್ರಮಗಳನ್ನು ಹಾಕುವುದು ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.







