ಕ್ರೀಡಾ ಗ್ರಾಮ ತಲುಪಿದ ಸಾನಿಯಾ ಮಿರ್ಝಾ
ರಿಯೋ ಡಿ ಜನೈರೊ, ಆ.2: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹಾಗೂ ಟೇಬಲ್ ಟೆನಿಸ್ ಆಟಗಾರರು ರಿಯೋ ಗೇಮ್ಸ್‌ನ ಕ್ರೀಡಾ ಗ್ರಾಮವನ್ನು ಪ್ರವೇಶಿಸಿದ್ದಾರೆ. ಇದೇ ವೇಳೆ, ಭಾರತೀಯ ಹಾಕಿ ತಂಡ ಸ್ಪೇನ್ ವಿರುದ್ಧದ ಕೊನೆಯ ಅಭ್ಯಾಸ ಪಂದ್ಯವನ್ನು ಗೆದ್ದುಕೊಂಡು ಇಲ್ಲಿಗೆ ಆಗಮಿಸಿದೆ.
ಸಾನಿಯಾ ಕ್ರೀಡಾಗ್ರಾಮವನ್ನು ತಲುಪಿದ ಭಾರತದ ಮೊದಲ ಟೆನಿಸ್ ಆಟಗಾರ್ತಿ. ಮೂರನೆ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಾನಿಯಾ ರೋಜರ್ಸ್ ಕಪ್‌ನಲ್ಲಿ ಪಾಲ್ಗೊಳ್ಳಲು ಮಾಂಟ್ರಿಯಲ್‌ಗೆ ತೆರಳಿದ್ದರು. ಮಾಂಟ್ರಿಯಲ್‌ನಿಂದ ಬ್ರೆಝಿಲ್‌ಗೆ ಆಗಮಿಸಿದ್ದಾರೆ.
ಸಾನಿಯಾ ಮಹಿಳೆಯರ ಡಬಲ್ಸ್‌ನಲ್ಲಿ ಪ್ರಾರ್ಥನಾ ಥಾಂಬ್ರೆ ಅವರೊಂದಿಗೆ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣರ ಜೊತೆಗೂಡಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಆಗಸ್ಟ್ 6 ರಂದು ಮಹಿಳೆಯರ ಡಬಲ್ಸ್ ಹಾಗೂ ಆ.10 ರಂದು ಮಿಶ್ರ ಡಬಲ್ಸ್ ಪಂದ್ಯ ನಡೆಯುತ್ತವೆ.
ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಆಡುವುದು ಯಾವಾಗಲೂ ಕುತೂಹಲಕಾರಿಯಾಗಿರುತ್ತದೆ. ಎಲ್ಲ ಟೆನಿಸ್ ಆಟಗಾರರು ಫಿಟ್ ಆಗಿದ್ದಾರೆಂಬ ವಿಶ್ವಾಸ ನನಗಿದೆ. ಬ್ರಯಾನ್ ಸಹೋದರರು ಗೇಮ್ಸ್‌ನಿಂದ ಹೊರಗುಳಿದಿದ್ದರೂ ಅಮೆರಿಕ ತಂಡ ಬಲಿಷ್ಠವಾಗಿದೆ ಎಂದು ಸಾನಿಯಾ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಅಥ್ಲೀಟ್ ನಿಯೋಗದ ಚೀಫ್ ಡಿ ಮಿಶನ್ ರಾಕೇಶ್ ಗುಪ್ತಾ ಸಾನಿಯಾರಿಗೆ ಒಲಿಂಪಿಕ್ ಸ್ಮರಣಿಕೆಯನ್ನು ನೀಡಿ ಕ್ರೀಡಾ ಗ್ರಾಮಕ್ಕೆ ಸ್ವಾಗತಿಸಿದರು.
ರವಿವಾರ ಶರತ್ ಕಮಲ್,ಸೌಮ್ಯಜಿತ್ ಘೋಷ್, ವೌಮಾ ದಾಸ್ ಹಾಗೂ ಮೊನಿಕಾ ಬಾತ್ರಾ ಅವರನ್ನೊಳಗೊಂಡ ಟೇಬಲ್ ಟೆನಿಸ್ ಆಟಗಾರರು ಇಲ್ಲಿಗೆ ಆಗಮಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಶರತ್ ಮೂರನೆ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸೌಮ್ಯಜಿತ್‌ಗೆ ಇದು 2ನೆ ಒಲಿಂಪಿಕ್ಸ್.2004ರ ಅಥೆನ್ಸ್ ಗೇಮ್ಸ್‌ನಲ್ಲಿ ವೌಮಾ ದಾಸ್ ಭಾಗವಹಿಸಿದ್ದರು. ಮೊನಿಕಾ ಬಾತ್ರಾ ಚೊಚ್ಚಲ ಒಲಿಂಪಿಕ್ಸ್ ಆಡುತ್ತಿದ್ದಾರೆ.
ಒಲಿಂಪಿಕ್ಸ್ ಒಂದು ಮಹಾ ವೇದಿಕೆ. ನಾನು ಈಗಾಗಲೇ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಕಾರಣ ಈ ಬಾರಿ ಪದಕ ಗೆಲ್ಲಲು ಬಯಸಿರುವೆ ಎಂದು ಹಿರಿಯ ಟಿಟಿ ಆಟಗಾರ ಶರತ್ ಹೇಳಿದ್ದಾರೆ.
ಭಾರತೀಯ ಹಾಕಿ ತಂಡ ರವಿವಾರ ಮ್ಯಾಡ್ರಿಡ್‌ನಲ್ಲಿನಡೆದ ಸ್ಪೇನ್ ವಿರುದ್ಧದ 3ನೆ ಅಭ್ಯಾಸ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡು ಬ್ರೆಝಿಲ್‌ಗೆ ಆಗಮಿಸಿದೆ. ಪಿ.ಆರ್. ಶ್ರೀಜೇಶ್ ನೇತೃತ್ವದ ಭಾರತ ಮೊದಲೆರಡು ಅಭ್ಯಾಸ ಪಂದ್ಯಗಳನ್ನು ಸೋತಿತ್ತು







