‘ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಶಾಲಾ ಮುಖ್ಯಸ್ಥರನ್ನು ಬಂಧಿಸಿ’
ಕಡಬ, ಆ.2: ನೀರುಮಾರ್ಗ ಸಮೀಪದ ಬೊಂಡಂತಿಲ ಶಾಲೆಯೊಂದರಲ್ಲಿ ಅನ್ಯಮತೀಯ ಹಿಂದು ಮಕ್ಕಳಿಗೆ ಬಲವಂತವಾಗಿ ಉರ್ದು ಮತ್ತು ಅರೇಬಿಕ್ ಪಠ್ಯದ ಬಗ್ಗೆ ಒತ್ತಡ ಹೇರಲಾಗಿದ್ದು ಈ ಬಗ್ಗೆ ಶ್ರೀರಾಮ ಸೇನೆಯವರು ಶಾಲೆಗೆ ಭೇಟಿ ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದು ದಾಳಿ ನಡೆಸಿದ್ದಾರೆ ಎಂಬ ಆರೋಪದಡಿ ಸೇನೆಯ ಪ್ರಮುಖರನ್ನು ವಶಕ್ಕೆ ಪಡೆದಿರುವುದು ಖಂಡನೀಯ ಎಂದು ಕಡಬ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಗೋಪಾಲ ಮೇಲಿನಮನೆ ಆರೋಪಿಸಿದ್ದಾರೆ.
ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ನೀರುಮಾರ್ಗ ಸಮೀಪದ ಪಡು ಬೊಂಡಂತಿಲದಲ್ಲಿರುವ ಸೈಂಟ್ ಥೋಮಸರ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ಬಲವಂತವಾಗಿ ಉರ್ದು ಮತ್ತು ಅರೇಬಿಕ್ ಬಾಷಾ ಶಿಕ್ಷಣವನ್ನು ಕಲಿಸಲಾಗುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮ ಸೇನೆಯ ಪ್ರಮುಖರು ಶಾಲೆಗೆ ಭೇಟಿ ನೀಡಿ ಮಕ್ಕಳ ಹೆತ್ತವರೊಂದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆಯ ಮುಖ್ಯಸ್ಥರು ಶ್ರೀರಾಮ ಸೇನೆಯಿಂದ ದಾಳಿ ನಡೆಸಲಾಗಿದೆ ಎಂದು ದೂರು ನೀಡಿದ್ದು, ವಿನಾ ಕಾರಣ ಶ್ರೀರಾಮ ಸೇನೆಯ ಮುಖ್ಯಸ್ಥರು ಹಾಗೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದನ್ನು ಖಂಡಿಸಿದ ಅವರು ನಿಜವಾಗಿ ಅಲ್ಲಿ ಶಾಲಾ ಮುಖ್ಯಸ್ಥರನ್ನು ಬಂಧಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು ಪೊಲೀಸರು ಕೂಲಂಕುಷ ತನಿಖೆ ನಡೆಸದೆ ಏಕಾಏಕಿ ಹಿಂದು ಸಂಘಟನೆಯ ಮೇಲೆ ದೋಷಾರೋಪ ಮಾಡಿರುವುದು ಸರಿಯಲ್ಲ. ಪ್ರಕರಣದ ಬಗ್ಗೆ ಹಿಂದು ಮಕ್ಕಳನ್ನು ಅನ್ಯಮತೀಯ ಶಿಕ್ಷಣವನ್ನು ಹೇರಲು ಒತ್ತಾಯಿಸಿದ ಶಾಲಾ ಮುಖ್ಯಸ್ಥರನ್ನು ಬಂಧಿಸಿ ಕೂಡಲೇ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ತಾಲೂಕು ಸಂಚಾಲಕ ಮೋಹನ್ ಕೆರೆಕೋಡಿ, ಸಹಸಂಚಾಲಕ ಅರುಣ್ ಕುಮಾರ್ ರೈ ಕಳಾರ, ಮೋಹನ್ ಸುಳ್ಯ ಐತ್ತೂರು, ಕಡಬ ನಗರ ಸಂಚಾಲಕ ಯತೀನ್ ಎಸ್., ನಗರ ಅಧ್ಯಕ್ಷ ಗಿರೀಶ್ ರೈ, ನಗರ ಸಹಸಂಚಾಲಕ ಪ್ರಕಾಶ್ ಕೊಲ್ಲೆಸಾಗು, ಸುಂದರ ಪೂಜಾರಿ ಅಂಗಣ ಉಪಸ್ಥಿತರಿದ್ದರು.





