ಪಂಜಾಬ್ ಹೈನುಗಾರರಿಗೆ ಕೇಸರಿ ಸಂಘಟನೆ ಕಿರುಕುಳ
ಪ್ರಗತಿಪರ ಹೈನುಗಾರರ ಸಂಘ ಆರೋಪ

ಚಂಡಿಗಡ,ಆ.2: ಗೋರಕ್ಷಣೆಯ ಹೆಸರಿನಲ್ಲಿ ತಮಗೆ ಕಿರುಕುಳ ನೀಡುತ್ತಿರುವ ಕೇಸರಿ ಸಂಘಟನೆಗಳ ಕಾರ್ಯಕರ್ತರನ್ನು ಪಂಜಾಬ್ ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಪ್ರಗತಿಪರ ಹೈನುಗಾರರ ಸಂಘ(ಪಿಡಿಎಫ್‌ಎ)ವು ಆರೋಪಿಸಿದೆ. ಗೋರಕ್ಷಕರ ಗುಂಪುಗಳು ಜಾನುವಾರುಗಳನ್ನು ಸಾಗಿಸುವ ಹೈನುಗಾರರ ಮೇಲೆ ಹಲ್ಲೆಗಳನ್ನು ನಡೆಸುತ್ತಿವೆ ಎಂದು ಸಂಘದ ಸದಸ್ಯರು ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯರು, ಈ ದುಷ್ಕರ್ಮಿಗಳನ್ನು ನಿಯಂತ್ರಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳದಿದ್ದರೆ ಪಂಜಾಬ್‌ನಲ್ಲಿ ಜಾನುವಾರುಗಳ ವ್ಯಾಪಾರವು ಕುಸಿಯುವ ಭೀತಿಯನ್ನು ವ್ಯಕ್ತಪಡಿಸಿದರು. ಜಾನುವಾರು ಸಾಗಾಟದ ವಾಹನಗಳ ಚಾಲಕರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿರುವ ಹಲವಾರು ನಿದರ್ಶನಗಳನ್ನು ಅವರು ನೀಡಿದರು.
ಸರಕಾರವು ಗೋ ಸುರಕ್ಷತಾ ಮಂಡಳಿಯನ್ನು ರಚಿಸಿದ್ದು, ಇದರಲ್ಲಿರುವ ಶಂಕಿತ ವ್ಯಕ್ತಿಗಳು ಗೋರಕ್ಷಕ ಗುಂಪುಗಳೊಂದಿಗೆ ಸೇರಿಕೊಂಡು ಜಾನುವಾರು ವ್ಯಾಪಾರಿಗಳು ಮತ್ತು ಹೈನುಗಾರರನ್ನು ಥಳಿಸುತ್ತಾರೆ ಮತ್ತು ಅವರಿಂದ ಹಣವನ್ನು ಕಿತ್ತುಕೊಳ್ಳುತ್ತಾರೆ ಎಂದು ಪಿಡಿಎಫ್‌ಎದ ಆಡಳಿತ ನಿರ್ದೇಶಕ ದಲ್ಜಿತ್ ಸಿಂಗ್ ಹೇಳಿದರು.
ಆರೆಸ್ಸೆಸ್‌ನ ಸೂಚನೆಯ ಮೇರೆಗೆ ಸರಕಾರವು ಹೈನುಗಾರರಿಗೆ ವಾಣಿಜ್ಯಿಕವಾಗಿ ಲಾಭಕರವಲ್ಲದ ದೇಶಿ ಗೋವುಗಳನ್ನು ಉತ್ತೇಜಿಸಲು ಬಯಸುತ್ತಿದೆ ಎಂದ ಅವರು, ರಾಜ್ಯಾದ್ಯಂತ ಹಾಲು ಉತ್ಪಾದಕರು ವಾರ್ಷಿಕ 2,500 ಕೋ.ರೂ.ಗಳ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದರು.
ಜಾನುವಾರುಗಳ ಸಾಗಾಟಕ್ಕೆ ನಿರಾಕ್ಷೇಪಣಾ ಪತ್ರ(ಎನ್‌ಒಸಿ)ವನ್ನು ಪಡೆದುಕೊಳ್ಳಬೇಕೆಂದು ಸರಕಾರವು ಇತ್ತೀಚೆಗೆ ಹೈನುಗಾರರಿಗೆ ನೀಡಿರುವ ನಿರ್ದೇಶವು ಸೂಕ್ತವಾಗಿ ಅನುಷ್ಠಾನ ಗೊಳ್ಳುತ್ತಿಲ್ಲ. ಇಂತಹ ಎನ್‌ಒಸಿಗಳಿಗಾಗಿ ಸಲ್ಲಿಸಿರುವ ನೂರಾರು ಅರ್ಜಿಗಳು ಹಲವು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಳೆಯುತ್ತಿವೆ ಎಂದು ಸಿಂಗ್ ತಿಳಿಸಿದರು.
ಎನ್‌ಒಸಿ ಹಗರಣ: ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲಿರುವ ಡಾಬ್‌ವಾಲಿ ಜಾನುವಾರು ಮಾರುಕಟ್ಟೆಯಲ್ಲಿ ಎನ್‌ಒಸಿ ಹೆಸರಿನಲ್ಲಿ ಬೃಹತ್ ಹಗರಣ ನಡೆಯುತ್ತಿದೆ. ಎನ್‌ಒಸಿಗಳನ್ನು ನೀಡುವಲ್ಲಿ ಜಿಲ್ಲಾಧಿಕಾರಿಗಳ ಔದಾಸೀನ್ಯದಿಂದಾಗಿ ರಾಜ್ಯಾದ್ಯಂತದ ಹೈನುಗಾರರು ಎನ್‌ಒಸಿಗಾಗಿ ಡಾಬ್‌ವಾಲಿ ಜಾನುವಾರು ಮಾರುಕಟ್ಟೆಗೆ ಹೋಗುತ್ತಿದ್ದು, ಅಲ್ಲಿ ಅವರು ಮಾರುಕಟ್ಟೆ ಶುಲ್ಕವಾಗಿ 2,000 ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ಜಾನುವಾರು ವ್ಯಾಪಾರಿ ಅಮರಜಿತ್ ಸಿಂಗ್ ಹೇಳಿದರು.
ಜಾನುವಾರು ಸಾಗಾಟದ ವೆಚ್ಚ 20,000 ರೂ.ನಿಂದ 60,000 ರೂ.ಗೆ ಹೆಚ್ಚಿದೆ ಎಂದ ಅವರು, ಗೋರಕ್ಷಕರು ಚಾಲಕರನ್ನು ಥಳಿಸಿದ ಮತ್ತು ನಂತರ ಬಠಿಂಡಾ ಪೊಲೀಸರು ಟ್ರಕ್‌ಗಳನ್ನು ವಶಪಡಿಸಿಕೊಂಡ ಇತ್ತೀಚಿನ ಘಟನೆಯ ಬಗ್ಗೆ ದೂರಿಕೊಂಡರು. ಪೊಲೀಸರಿಗೆ ನಾವು ನೀಡಿದ್ದ ದೂರುಗಳು ನಮಗೇ ತಿರುಗುಬಾಣವಾಗಿ ಪರಿಣಮಿಸಿದ್ದು,ಶಿವಸೇನಾ ಕಾರ್ಯ ಕರ್ತರು ನಮಗೆ ಕಿರುಕುಳ ನೀಡುತ್ತಿದ್ದರೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದರು.
ಚಾಲಕರ ಬಳಿ ಜಾನುವಾರು ಸಾಗಾಟಕ್ಕೆ ಪರವಾನಿಗೆ ಯಿರಲಿಲ್ಲ, ಹೀಗಾಗಿ ಟ್ರಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಬಠಿಂಡಾ ಎಸ್ಪಿ ಸ್ವಪನ್ ಶರ್ಮಾ ಅವರು, ಶಿವಸೇನೆಯಿಂದ ಹೈನುಗಾರರಿಗೆ ಕಿರುಕುಳ ವಾಗುತ್ತಿಲ್ಲ ಎಂದರು.







