ಸರಕಾರದ ಬೊಕ್ಕಸಕ್ಕೆ 4.16 ಕೋಟಿ ರೂ.ನಷ್ಟ: ಐಟಿ ಅಧಿಕಾರಿಗಳಿಗೆ 5 ವರ್ಷ ಜೈಲು ಶಿಕ್ಷೆ

ಬೆಂಗಳೂರು, ಆ.2: ಸರಕಾರದ ಬೊಕ್ಕಸಕ್ಕೆ 4.16 ಕೋಟಿ ರೂ.ನಷ್ಟವುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು, ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 7.50 ಲಕ್ಷ ರೂ.ದಂಡ ವಿಧಿಸಿ ಆದೇಶಿಸಿದೆ.
ಆದಾಯ ತೆರಿಗೆ ಇಲಾಖೆಯ ಹಿಂದಿನ ಹೆಚ್ಚುವರಿ ಆಯುಕ್ತ ಧಿರೇಂದ್ರಕುಮಾರ್ ಝಾ ಹಾಗೂ ಉಪ ಆಯುಕ್ತ ಯು.ಎ.ಚಂದ್ರವೌಳಿ ಎಂಬವರು ಚಿಲ್ಡ್ರನ್ಸ್ ಎಜ್ಯುಕೇಷನ್ ಸೊಸೈಟಿ ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸರಕಾರಕ್ಕೆ 4.16 ಕೋಟಿ ರೂ.ನಷ್ಟವುಂಟು ಮಾಡಿದ್ದರು.
ಈ ಸಂಬಂಧ 2008ರ ಸೆ.26ರಂದು ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಅಲ್ಲದೆ, ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಳಿಸಿ ಐಪಿಸಿ ಸೆಕ್ಷನ್ 120(ಬಿ), 218, 420, 1988ರ ಭ್ರಷ್ಟಾ ಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13(2), 13(1)(ಡಿ) ಅಡಿಯಲ್ಲಿ 2010ರ ಎ.21ರಂದು ನ್ಯಾಯಾಲಯದಲ್ಲಿ ಸಿಬಿಐ ಅಧಿಕಾರಿಗಳು ದೋಷಾರೋಪಣ ಪಟ್ಟಿಯನ್ನು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಧಿರೇಂದ್ರಕುಮಾರ್ ಝಾ ಹಾಗೂ ಯು.ಎ.ಚಂದ್ರವೌಳಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಐದು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 7.50 ಲಕ್ಷ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.







