ಕಾಪು ಹೋಬಳಿಯಲ್ಲಿ ಮೂರು ಐಟಿಐಗಳ ಸ್ಥಾಪನೆ: ಸೊರಕೆ

ಉಡುಪಿ, ಆ.2: ಗುಮಾಸ್ತಗಿರಿ ಉತ್ಪಾದನೆಯ ಶಿಕ್ಷಣದ ಬದಲು ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಾಪು ಹೋಬಳಿ ಮಟ್ಟದಲ್ಲಿ ಮೂರು ಐಟಿಐಗಳನ್ನು ಸ್ಥಾಪಿಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾಲಾ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಬೆಳಪುವಿನಲ್ಲಿ ಶಿಲಾನ್ಯಾಸಗೊಂಡಿ ರುವ ರಾಷ್ಟ್ರ ಮಟ್ಟದ ವಿಜ್ಞಾನ ಕೇಂದ್ರಕ್ಕೆ ಐದು ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದರು.
ಶಿಕ್ಷಕರ ವಲಯ ಕೇಂದ್ರ ಸ್ಥಾಪನೆ
ಕಾಪು ವಲಯದ ಎಲ್ಲಾ ಶಿಕ್ಷಕರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಲು, ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾಪುವಿನಲ್ಲಿ ಶಿಕ್ಷಕರ ವಲಯ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿದ್ದು, ಅದಕ್ಕೆ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು.
ಸರಕಾರದಿಂದ ಕೊಡಮಾಡಿದ ಉಚಿತ ಸಮವಸ್ತ್ರ, ಶೂ ಮತ್ತು ಗುರುತುಚೀಟಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ತಾಪಂ ಸದಸ್ಯೆ ರಜನಿ ಅಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಗಿರೀಶ್ ಕುಮಾರ್, ಮಾಜಿ ಜಿಪಂ ಸದಸ್ಯ ವಾಮನ್ ಬಂಗೇರ, ಪಿಟಿಎ ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗುರುತು ಚೀಟಿ, ಶಾಲಾ ಕೈಪಿಡಿಯ ಪ್ರವರ್ತಕರಾದ ಗ್ರಾಪಂ ಸದಸ್ಯ ಕಿರಣ್ ಕುಮಾರ್, ತಿಲಕರಾಜ ಸಾಲ್ಯಾನ್, ಹೆನ್ರಿ ಡಿಸೋಜ ಅವರನ್ನು ಅಭಿನಂದಿಸಲಾಯಿತು.
ಪಿಯುಸಿ, ಎಸೆಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿವಿಯನ್ ಡಿಸೋಜ, ದಿವ್ಯಾರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಿಯುಸಿ ವಿಭಾಗದ ಬಿಸಿಯೂಟ ಪ್ರಾರಂಭಿಸಲು ಉದ್ಯಾವರ ಫ್ರೆಂಡ್ಸ್ ಕ್ಲಬ್ 20,000 ರೂ. ಪ್ರಥಮ ದೇಣಿಗೆಯನ್ನು ಘೋಷಿಸಿತು.
ಪ್ರಾಂಶುಪಾಲ ಮಹೇಂದ್ರ ಎನ್. ಶರ್ಮ ಸ್ವಾಗತಿಸಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಮೂಕಾಂಬೆ ವಂದಿಸಿದರು. ಉಪನ್ಯಾಸಕ ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







