ಅಸಮರ್ಪಕ ಕ್ರಿಯಾ ಯೋಜನೆಯ ಆರೋಪ: ಉದ್ಯಾವರ ಗ್ರಾಪಂ ವಿರುದ್ಧ ಪ್ರತಿಭಟನೆ
ಉಡುಪಿ, ಆ.2: ಉದ್ಯಾವರ ಗ್ರಾಮ ಪಂಚಾಯತ್‌ನ 2016-17ನೆ ಸಾಲಿನ ಕ್ರಿಯಾಯೋಜನೆ ಅಸಮರ್ಪಕವಾಗಿದೆ ಎಂದು ಆರೋಪಿಸಿ ಬಿಜೆಪಿ ಉದ್ಯಾವರ ಸ್ಥಾನೀಯ ಸಮಿತಿ ಇಂದು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.
14ನೆ ಹಣಕಾಸು ಆಯೋಗದ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಸರಿಯಾಗಿ ಮಾಹಿತಿ ನೀಡದೆ, ಅಸ ಮರ್ಪಕವಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಕ್ಷೇತ್ರಗಳಿಗೆ ಪೂರ್ವ ತಯಾರಿ ಪ್ರಯೋಜನವಾಗುವಂತೆ ಭಾಗಶಃ ಕ್ರಿಯಾ ಯೋಜನೆಯನ್ನು ತಯಾರಿಸ ಲಾಗಿದೆ. ಬಿಜೆಪಿ ಬೆಂಬಲಿತ ಸದಸ್ಯರ ಅಭಿಪ್ರಾಯ ಕೇಳದೆ ಅಧ್ಯಕ್ಷರು ಏಕ ಪಕ್ಷೀಯವಾಗಿ ನಿರ್ಣಯ ತೆಗೆದು ಕೊಂಡಿದ್ದಾರೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.
ಮಾರ್ಗಸೂಚಿಯನ್ವಯ ಒಟ್ಟು ಕಾಮಗಾರಿಯಲ್ಲಿ ಶೇ.25ರಷ್ಟು ಅನು ದಾನವನ್ನು ಕಾಮಗಾರಿಗೆ ವಿಂಗಡಿಸಿ ಇಡಬಹುದು. ಆದರೆ ಎಲ್ಲ ವಾರ್ಡ್‌ಗಳಿಗೆ ಹಂಚುವಂತಹ ರಸ್ತೆ ಹಾಗೂ ಚರಂಡಿ ಅನುದಾನವನ್ನೇ ಉದ್ದೇಶ ಪೂರ್ವಕವಾಗಿ ಶೇ.25ರ ಕಾಮಗಾರಿಗೆ ಕಾಯ್ದಿರಿಸಲಾಗಿದೆ. ಗ್ರಾಪಂ ನಿಧಿ, ಇತರ ಯೋಜನೆಗಳಿಗೆ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸದೆ ಸಭೆಯನ್ನು ಮುಂದೂಡಲಾಗಿದೆ. ಆದುದರಿಂದ ಗ್ರಾಪಂಗೆ ಭೇಟಿ ನೀಡಿ ಪಂಚಾಯತ್ ಸಭೆಯನ್ನು ಕರೆದು ನಿಯಮಾನುಸಾರ ಕ್ರಿಯಾಯೋಜನೆ ತಯಾರಿಸಲು ಅನುವು ಮಾಡಿಕೊಡ ಬೇಕೆಂದು ಪ್ರತಿಭಟನಾಕಾರರು ಜಿಪಂ ಸಿಇಒರನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ವಿಜಯಕುಮಾರ್ ಉದ್ಯಾವರ, ನಯನಾ, ಸಂತೋಷ್ ಕುಮಾರ್ ಗಣೇಶ್ ಕುಮಾರ್ ಮತ್ತಿತರರಿದ್ದರು.
ಆರೋಪ ರಾಜಕೀಯಪ್ರೇರಿತ
ಬಿಜೆಪಿ ಸದಸ್ಯರ ಆರೋಪಗಳು ರಾಜಕೀಯಪ್ರೇರಿತವಾಗಿದ್ದು, ಸತ್ಯಕ್ಕೆ ದೂರವಾದುದು. ಇಲಾಖೆಯ ಸುತ್ತೋಲೆಯ ನಿಯಮಗಳ ಪ್ರಕಾರ, ಎಲ್ಲ ಸದಸ್ಯರ ಸರ್ವಾನುಮತದ ನಿರ್ಣಯದಂತೆ ಕ್ರಿಯಾ ಯೋಜನೆ ಯನ್ನು ತಯಾರಿಸಲಾಗಿತ್ತು ಎಂದು ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.





