ಶಾಭಾಷ್ ನಾಯ್ಡುಗೆ ನೂರೆಂಟು ವಿಘ್ನ

‘ಶಾಭಾಷ್ ನಾಯ್ಡು’ ಚಿತ್ರದ ನಿರ್ಮಾಣವನ್ನು ಕಮಲ್ ಹಾಸನ್ ಘೋಷಿಸಿದಾಗಿನಿಂದ ಅದು ಒಂದಲ್ಲ ಒಂದು ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಮೊದಲಿಗೆ, ಈ ಚಿತ್ರದಲ್ಲಿ ಕಮಲ್ ಪುತ್ರಿ ಶ್ರುತಿಹಾಸನ್ ಕೂಡಾ ನಟಿಸಲಿರುವುದು ಚಿತ್ರಪ್ರೇಮಿಗಳಲ್ಲಿ ಕುತೂಹಲವನ್ನು ಮೂಡಿಸಿತ್ತು. ಯಾಕೆಂದರೆ ಶಾಭಾಷ್ ನಾಯ್ಡು ಮೂಲಕ ಅಪ್ಪ-ಮಗಳು ಇದೇ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದಾಗ್ಯೂ, ಇತ್ತೀಚಿನ ತಿಂಗಳುಗಳಲ್ಲಿ ಚಿತ್ರದ ಶೂಟಿಂಗ್ ಮುಂದೂಡಲ್ಪಡುತ್ತಲೇ ಹೋಗುತ್ತಿದೆ. ಶಾಭಾಷ್ ನಾಯ್ಡು ನಿರ್ದೇಶಿಸಲಿದ್ದ ಟಿ.ಕೆ. ರಾಜೀವ್ ಕುಮಾರ್ ಅನಾರೋಗ್ಯ ಪೀಡಿತರಾಗಿರುವ ಹಿನ್ನೆಲೆಯಲ್ಲಿ ಅವರು ಚಿತ್ರದಿಂದ ಹೊರನಡೆದಿದ್ದಾರೆ. ಆನಂತರ ಸ್ವತಃ ಕಮಲ್ ಅವರೇ ನಿರ್ದೇಶಕನ ಕ್ಯಾಪ್ ಧರಿಸಿದರು.
ಇನ್ನೇನು ಎಲ್ಲಾ ಸರಿಹೋಗಿ ಚಿತ್ರೀಕರಣ ಆರಂಭಗೊಂಡಾಗ, ಸಂಕಲನಕಾರ ಜೋಸೆಫ್ ಕೂಡಾ ತಂಡದಿಂದ ಹೊರನಡೆದರು. ಅಮೆರಿಕ ದಲ್ಲಿರುವ ಅವರ ಪತ್ನಿಗೆ ಅವಘಡವಾದ ಕಾರಣ ಆಕೆಯ ಜತೆಯಿರಲು ಜೋಸೆಫ್ ಅನಿವಾರ್ಯವಾಗಿ ಶಾಭಾಷ್ ನಾಯ್ಡುಗೆ ಗುಡ್‌ಬೈ ಹೇಳಬೇಕಾಯಿತು.
ಕತೆ ಇಷ್ಟಕ್ಕೆ ಮುಗಿಯಲಿಲ್ಲ. ಚಿತ್ರದ ಛಾಯಾಗ್ರಾಹಕ ಜಯಾಕೃಷ್ಣ ಗುಮ್ಮಾಡಿ ಅವರ ಕಾರ್ಯನಿರ್ವಹಣೆ ಬಗ್ಗೆ ಕಮಲ್ ಅಸಮಾಧಾನಗೊಂಡಿದ್ದರು. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳಲಿರುವ ಶಾಭಾಷ್ ನಾಯ್ಡುಗೆ ಸುದೀರ್ಘ ಅವಧಿಗೆ ಕಾಲ್‌ಶೀಟ್ ನೀಡಲು ಗುಮ್ಮಾಡಿ ಹಿಂದೇಟು ಹಾಕಿದರು.
ಇದರಿಂದಾಗಿ ಕಮಲ್‌ಹಾಸನ್‌ಗೆ ಚಿತ್ರಕ್ಕೆ ಹೊಸ ಫೋಟೊಗ್ರಾಫರ್‌ನನ್ನು ಹುಡುಕುವ ಹೊಣೆ ಬಿದ್ದಿದೆ. ಜೊತೆಗೆ ಕಮಲ್ ಕೂಡಾ ಇತ್ತೀಚೆಗೆ ಬಿದ್ದು ಗಾಯಗೊಂಡಿರುವುದರಿಂದ ಅವರಿಗೂ ತುಸು ಸಮಯ ವಿಶ್ರಾಂತಿ ಬೇಕಾಗಿದೆಯೆಂದು ನಿಕಟವರ್ತಿಗಳು ಹೇಳುತ್ತಿದ್ದಾರೆ.
ಎಲ್ಲ ಸರಿ ಹೋಗಿದ್ದರೆ ಕಮಲ್, ಶಾಭಾಷ್ ನಾಯ್ಡು ಚಿತ್ರವನ್ನು ಸೆಪ್ಟಂಬರ್‌ನಲ್ಲಿ ಬಿಡುಗಡೆ ಮಾಡಬೇಕಿತ್ತು. ಆದರೆ ಈಗ ಅದರ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದ್ದಾರೆ.
ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಚಿತ್ರೀಕರಣ ಪೂರ್ಣಗೊಂಡಿದ್ದರೂ ಬಿಡುಗಡೆಯ ಭಾಗ್ಯ ಕಾಣದಿರುವ ವಿಶ್ವರೂಪಂ2ಗೆ ಕೊನೆಗೂ ಮುಕ್ತಿ ದೊರೆಯುವ ಹಾಗೆ ಕಾಣುತ್ತಿದೆ. ಶಾಭಾಷ್ ನಾಯ್ಡು ಚಿತ್ರದ ಶೂಟಿಂಗ್ ಮುಂದೆ ಹೋಗಿರುವ ಹಿನ್ನೆಲೆಯಲ್ಲಿ ವಿಶ್ವರೂಪಂ2ನ್ನು ರಿಲೀಸ್ ಮಾಡಲು ಕಮಲ್ ಆಸಕ್ತಿ ತೋರಿದ್ದಾರೆನ್ನಲಾಗಿದೆ. ಈ ಚಿತ್ರದ ನಿರ್ಮಾಪಕ ಆಸ್ಕರ್ ರವಿಚಂದ್ರನ್‌ರಿಂದ ಚಿತ್ರದ ಹಕ್ಕುಗಳನ್ನು ಪಡೆಯಲು ಕಮಲ್ ಭಾರೀ ಮೊತ್ತವನ್ನು ಪಾವತಿಸಬೇಕಾಗಬಹುದು. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ವಿಶ್ವರೂಪಂ-2, ಶೀಘ್ರದಲ್ಲೇ ಕಮಲ್‌ಹಾಸನ್ ಅವರ ರಾಜಕಮಲ್ ಬ್ಯಾನರ್ ನಡಿಯಲ್ಲಿ ಬಿಡುಗಡೆಗೊಂಡರೆ ಅಚ್ಚರಿಯೇನಿಲ್ಲ.







