ತಲೆಗೂದಲು ಉದುರುವುದಕ್ಕೆ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ
ತಾಜಾ ಹಣ್ಣು ಮತ್ತು ತರಕಾರಿಗಳು ಕೇವಲ ಪೌಷ್ಟಿಕ ಆಹಾರವಷ್ಟೇ ಅಲ್ಲ; ನಿಮ್ಮ ಚರ್ಮ ಮತ್ತು ಕೂದಲಿನ ಸಂರಕ್ಷಣೆಗೂ ಇದು ಪ್ರಯೋಜನಕಾರಿ. ಕೂದಲು ಸಮಸ್ಯೆ ಅಧಿಕವಾಗುವ ಮುಂಗಾರಿನಲ್ಲಿ ಇವುಗಳ ಪರಿಹಾರಕ್ಕೆ ಆರು ಸುಲಭ ಸೂತ್ರಗಳು ಇಲ್ಲಿವೆ ನೋಡಿ. ನಿಮ್ಮ ಕೂದಲು ಸಮಸ್ಯೆಗಳಿಗೆ ನಿಮ್ಮ ಅಡುಗೆ ಮನೆಯಲ್ಲೇ ಪರಿಹಾರ ಇದೆ ಎನ್ನುತ್ತಾರೆ ದೆಹಲಿಯ ವೀನಸ್ ಕ್ಲಿನಿಕ್‌ನ ಕೂದಲುಶಾಸ್ತ್ರ ತಜ್ಞರಾದ ಸಿ.ಎಂ.ಗುರಿ. ಕೂದಲು ಉದುರುವುದನ್ನು ತಡೆಯಲು ಅಡುಗೆ ಮನೆಯ ತಿನಸುಗಳೇ ಮದ್ದು ಎನ್ನುವುದು ಆಕೆಯ ಸ್ಪಷ್ಟ ಅಭಿಪ್ರಾಯ.
ಆವೊಕಡೊ: ಇದು ಕೂದಲುಗಳನ್ನು ಬಲಗೊಳಿಸುವುದಲ್ಲದೇ ಹಾನಿಯಾದ ಕೂದಲುಗಳನ್ನು ಸರಿಪಡಿಸುತ್ತದೆ. ಇದು ಬಿ ಮತ್ತು ಇ ವಿಟಮಿನ್‌ನಿಂದ ಸಮೃದ್ಧವಾಗಿರುತ್ತದೆ. ಇವು ಕೇವಲ ಕೂದಲು ಬಲಗೊಳಿಸುವುದಷ್ಟೇ ಅಲ್ಲದೇ, ಕೂದಲಿನ ತೇವಾಂಶ ಹೆಚ್ಚಿಸುತ್ತದೆ. ಅದನ್ನು ಚೆನ್ನಾಗಿ ಅರೆದು ಮೊಟ್ಟೆಯ ದ್ರವ ಮಿಶ್ರ ಮಾಡಿ ತಲೆಗೆ ಹಚ್ಚಿ 20 ನಿಮಿಷ ಬಳಿಕ ತೊಳೆಯಬಹುದು.
ಕ್ಯಾರೆಟ್: ಕೂದಲು ಬೇರಿಗೆ ಕ್ಯಾರೆಟ್ ಉತ್ತಮ ಔಷಧ. ಇದು ಕೂದಲಿಗೆ ಅಗತ್ಯ ಬಲವನ್ನು ನೀಡುತ್ತದೆ. ಕ್ಯಾರೆಟ್ ರಸ ತೆಗೆದು, ಅರ್ಧ ಗಂಟೆ ಫ್ರಿಡ್ಜ್‌ನಲ್ಲಿಡಿ. ಕೂದಲು ಉದುರುವುದು ತಡೆಯಲು ನಿಮ್ಮ ತಲೆಗೆ ಹಚ್ಚಿಕೊಳ್ಳಿ.
ಈರುಳ್ಳಿ: ಈರುಳ್ಳಿ ಕೂದಲು ಉದುರುವುದನ್ನು ತಡೆಯುತ್ತದೆ. ಫಂಗಸ್ ಅಥವಾ ಬ್ಯಾಕ್ಟೀರಿಯಾ ಸೋಂಕಿನಿಂದ ಕೂದಲು ತೆಳ್ಳಗಾಗುವುದನ್ನೂ ಇದು ತಡೆಯುತ್ತದೆ. ನೀವು ಮಾಡಬೇಕಾದುದು ಇಷ್ಟೇ. ಈರುಳ್ಳಿ ರಸ ತೆಗೆದು, ಕೂದಲ ಬುಡಕ್ಕೆ ಹಚ್ಚಿ. 20 ನಿಮಿಷ ಬಳಿಕ ತೊಳೆದುಕೊಳ್ಳಿ.
ಬಾಳೆಹಣ್ಣು: ಪೊಟ್ಯಾಶಿಯಂ ಹಾಗೂ ವಿಟಮಿನ್ ಎ ಬಾಳೆಹಣ್ಣಿನಲ್ಲಿ ಅಧಿಕವಾಗಿರುತ್ತದೆ. ಇದು ಕೂದಲು ಬಲಗೊಳಿಸಲು ಮತ್ತು ನಯವಾಗಿಸಲು ಸಹಕಾರಿ. ಬಾಳೆಹಣ್ಣು ಮತ್ತು ಜೇನು ಮಿಶ್ರಣ ಹಾಳಾದ ಕೂದಲುಗಳ ದುರಸ್ತಿ ಮಾಡಿ, ದುರ್ಬಲ ಕೂದಲುಗಳನ್ನು ಬಲಗೊಳಿಸುತ್ತದೆ. ಒಂದು ಬಾಳೆಹಣ್ಣನ್ನು ಕಿವುಚಿ, ಒಂದು ಚಮಚ ಜೇನು ಹಾಕಿ ಕೂದಲ ಬೇರಿಗೆ ಹಚ್ಚಿ. 15-20 ನಿಮಿಷ ಬಿಟ್ಟು ಶಾಂಪೂ ಹಾಕಿ ತೊಳೆದುಕೊಳ್ಳಿ.
ತೆಂಗಿನಹಾಲು: ತೆಂಗಿನೆಣ್ಣೆ ಮಾತ್ರವಲ್ಲದೇ ತೆಂಗಿನ ಹಾಲು ಕೂಡಾ ಕೂದಲ ಬೇರು ಬಲಗೊಳಿಸುತ್ತದೆ. ನಿಮ್ಮ ಕೂದಲು ಬಲಕಳೆದುಕೊಂಡಿದ್ದರೆ ತೆಂಗಿನಹಾಲು ಮತ್ತು ಜೇನು ಮಿಶ್ರ ಮಾಡಿ ಹಚ್ಚಿಕೊಳ್ಳಬೇಕು. ಒಂದು ಗಂಟೆ ಹಾಗೆಯೇ ಬಿಟ್ಟು ಬಳಿಕ ಶಾಂಪೂ ಹಾಕಿ ತೊಳೆದುಕೊಳ್ಳಿ.
ಓಟ್ ಹಿಟ್ಟು: ತಲೆ ಹೊಟ್ಟು ಸಮಸ್ಯೆಗೆ ಇದು ಉತ್ತಮ ಪರಿಹಾರ. ಇದು ಕೂದಲ ಜಿಡ್ಡನ್ನು ಕಡಿಮೆ ಮಾಡಿ, ಬಲಗೊಳಿಸುತ್ತದೆ. ಒಂದು ಚಮಚ ಒಟಮೀಲ್‌ಗೆ ಇಂದು ಲೋಟ ಹಾಲು ಹಾಗೂ ಬಾದಾಮಿ ಎಣ್ಣೆ ಬೆರಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು 15-20 ನಿಮಿಷಗಳ ಬಳಿಕ ತೊಳೆದುಕೊಂಡರೆ ಉತ್ತಮ ಫಲಿತಾಂಶ ಸಿಗುತ್ತದೆ.