ನೇಪಾಳದ ಪ್ರಧಾನಿಯಾಗಿ ಪ್ರಚಂಡ ಆಯ್ಕೆ

ಕಠ್ಮಂಡು,ಆ.3:ಎರಡನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಮಾವೋವಾದಿ ನಾಯಕ ಪ್ರಚಂಡ ಅವರು ಬುಧವಾರ ಆಯ್ಕೆಯಾಗಿದ್ದಾರೆ. ಪ್ರಧಾನಿಯಾಗಿ ಅವರ ಆಯ್ಕೆಯು ನೂತನ ಸಂವಿಧಾನ ಕುರಿತಂತೆ ತೀವ್ರ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯಾಗಿದ್ದ ನೇಪಾಳದಲ್ಲಿ ಅತ್ಯಂತ ಅಗತ್ಯವಾಗಿರುವ ರಾಜಕೀಯ ಸ್ಥಿರತೆಯನ್ನು ತರುವ ನಿರೀಕ್ಷೆಯಿದೆ. ಪ್ರಚಂಡ ಎಂದೇ ಜನಪ್ರಿಯರಾಗಿರುವ ಸಿಪಿಎನ್ ಮಾವೋಯಿಸ್ಟ್ ಸೆಂಟರ್‌ನ ಮುಖ್ಯಸ್ಥ ಪುಷ್ಪಕಮಲ್ ದಹಲ್(61) ಪ್ರಧಾನಿ ಸ್ಥಾನಕ್ಕೆ ಏಕೈಕ ಸ್ಪರ್ಧಿ ಯಾಗಿದ್ದರಾದರೂ, ಈ ಉನ್ನತ ಸ್ಥಾನಕ್ಕೇರುವ ವ್ಯಕ್ತಿ ಸಂಸತ್ತಿನಲ್ಲಿ ಬಹುಮತದ ಬೆಂಬಲ ಸಾಬೀತುಗೊಳಿಸುವುದನ್ನು ಸಂವಿಧಾನವು ಕಡ್ಡಾಯಗೊಳಿಸಿರುವುದರಿಂದ ಮತದಾನವನ್ನು ನಡೆಸಲಾಯಿತು. ಒಟ್ಟು 595 ಸಂಸದರ ಪೈಕಿ 363 ಸದಸ್ಯರು ಪ್ರಚಂಡ ಪರವಾಗಿ ಮತ್ತು 210 ಸದಸ್ಯರು ವಿರುದ್ಧವಾಗಿ ಮತಗಳನ್ನು ಚಲಾಯಿಸಿದರು. 22 ಸದಸ್ಯರು ಮತದಾನದಲ್ಲಿ ಭಾಗವಹಿಸಿರಲಿಲ್ಲ.
2008ರಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿದ್ದ ಪ್ರಚಂಡ ಸೇನಾ ಮುಖ್ಯಸ್ಥರನ್ನು ವಜಾಗೊಳಿಸುವ ತನ್ನ ಪ್ರಯತ್ನಕ್ಕೆ ಮಿಲಿಟರಿಯ ವಿರೋಧದ ಹಿನ್ನೆಲೆಯಲ್ಲಿ 2009ರಲ್ಲಿ ಹುದ್ದೆಯನ್ನು ತೊರೆದಿದ್ದರು.
ನೇಪಾಲಿ ಕಾಂಗ್ರೆಸ್ ಮತ್ತು ಮಾಧೇಸಿ ಫ್ರಂಟ್ ಪ್ರಚಂಡ ಅವರನ್ನು ಬೆಂಬಲಿಸಿವೆ. ಮಾವೋವಾದಿಗಳು ಸಮ್ಮಿಶ್ರ ಸರಕಾರಕ್ಕೆ ತಮ್ಮ ಬೆಂಬಲವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ.ಶರ್ಮಾ ಒಲಿ ಅವರು ಕಳೆದ ತಿಂಗಳು ರಾಜೀನಾಮೆ ನೀಡಿದಾಗಿನಿಂದ ಪ್ರಧಾನಿ ಹುದ್ದೆ ತೆರವಾಗಿತ್ತು.







