ಕರ್ನಿರೆ: ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ ವಿರೋಧಿಸಿ ಧರಣಿ

ಕಿನ್ನಿಗೋಳಿ, ಆ.3: ಸರಕಾರ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್, ಬಿಸಿಯೂಟ ಮತ್ತಿತರ ಸವಲತ್ತನ್ನು ಒದಗಿಸುತ್ತದೆ ಆದರೆ ಶಿಕ್ಷಕರ ವರ್ಗಾವಣೆಯಿಂದ ಶಿಕ್ಷಣಕ್ಕೆ ತೊಂದರೆ ಕೊಡುತ್ತಿದೆ ಎಂದು ದಾರ್ಮಿಕ ಮುಖಂಡ ಹರಿಶ್ಚಂದ್ರ ಶೆಟ್ಟಿ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರ್ನಿರೆಯಲ್ಲಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರು ಮಕ್ಕಳ ಶಿಕ್ಷಣಕ್ಕೊಸ್ಕರ ಸರಕಾರಿ ಶಾಲೆಯನ್ನೇ ನಂಬಿದ್ದಾರೆ. ಆದರೆ ಸರಕಾರದ ಈ ಅವೈಜ್ಞಾನಿಕ ನೀತಿಯಿಂದ ಸಮಸ್ಯೆಗೊಳಗಾಗುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ, ಹೆಚ್ಚಿನ ಎಲ್ಲಾ ಸರಕಾರಿ ಶಾಲೆಗಳೂ ಸರಕಾರದ ಈ ನೀತಿಯಿಂದ ತೊಂದರೆಗೊಳಗಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು, ಬಳ್ಕುಂಜೆ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ಸರಕಾರಿ ಶಾಲೆಗಳನ್ನು ಉಳಿಸಲು ಹೊರಟಿರುವ ಸರಕಾರ, ಶಿಕ್ಷಕರ ವರ್ಗಾವಣೆ ಮಾಡಿ ಬೇರೆ ಶಿಕ್ಷಕರನ್ನೂ ನೀಡದೆ ವಿದ್ಯಾರ್ಥಿಗಳ ಪೋಷಕರನ್ನು ಅತಂಕಕ್ಕೀಡು ಮಾಡಿದೆ ಎಂದರು.
ಈ ಸಂದರ್ಭ ವಿದ್ಯಾರ್ಥಿಗಳ ಪೋಷಕರು ಶಿಕ್ಷಕರ ವರ್ಗಾವಣೆ ಮಾಡದಂತೆ, ಶಿಕ್ಷಕರ ಮೂಲಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು. ಪಂಚಾಯತ್ ಸದಸ್ಯೆ ರಶ್ಮಿ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯ ಪ್ರಭಾಕರ ಶೆಟ್ಟಿ, ಕರ್ನಿರೆ ಜುಮಾ ಮಸೀದಿ ಮಾಜಿ ಅಧ್ಯಕ್ಷ ಸೈಯದ್ ಕರ್ನಿರೆ, ಎಸ್‌ಡಿಎಂಸಿ ಅಧ್ಯಕ್ಷೆ ವಿಶಾಲಾಕ್ಷಿ, ರವೀಂದ್ರ ಶೆಟ್ಟಿ ಕರ್ನಿರೆ, ಸಂತೋಷ್ ಶೆಟ್ಟಿ ಆಶಾ ಮತ್ತಿತರರು ಇದ್ದರು.







