ಮೈಸೂರು ಸ್ಫೋಟ ಪ್ರಕರಣ: ತನಿಖೆ ಪ್ರಗತಿಯಲ್ಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಆ.3: ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣವನ್ನು ಎನ್‌ಐಎ(ರಾಷ್ಟ್ರೀಯ ತನಿಖಾ ತಂಡ) ಹಾಗೂ ಕೇಂದ್ರ ಗುಪ್ತಚರ ಇಲಾಖೆ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎಪ್ರಿಲ್‌ನಲ್ಲಿ ಆಂಧ್ರಪ್ರದೇಶದ ಚಿತ್ತೂರಿನ ನ್ಯಾಯಾಲಯದಲ್ಲಿ ಹಾಗೂ ಜು. 14ರಂದು ಕೇರಳದ ಕೊಲ್ಲಂ ನ್ಯಾಯಾಲಯದಲ್ಲಿ ಸ್ಫೋಟ ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಇವೆಲ್ಲ ಸ್ಫೋಟಗಳಿಗೆ ಸಾಮ್ಯತೆಗಳಿವೆ ಎಂಬುದರ ಕುರಿತು ಎನ್‌ಐಎ ತನಿಖೆ ನಡೆಸುತ್ತಿರುವುದರಿಂದ ಈಗಲೆ ಏನನ್ನು ಹೇಳಲಾಗುವುದಿಲ್ಲ ಎಂದು ತಿಳಿಸಿದರು.
ಈ ಪ್ರಕರಣ ಕುರಿತು ಯಾವುದೇ ಸಂಘಟನೆ ಈವರೆಗೆ ಹೊಣೆ ಹೊತ್ತಿಲ್ಲ. ಬಹುಶಃ ಭಯದ ವಾತಾವರಣ ಸೃಷ್ಟಿಸಿ ತಮ್ಮ ಅಸ್ತಿತ್ವವನ್ನು ತೋರ್ಪಡಿಸುವುದಕ್ಕಾಗಿ ದುಷ್ಕರ್ಮಿಗಳು ದೇಶಾದ್ಯಂತ ಸ್ಫೋಟಗಳನ್ನು ನಡೆಸುತ್ತಿದ್ದಾರೆ. ಇವೆಲ್ಲವುಗಳ ಕುರಿತು ಎನ್‌ಐಎ ತನಿಖೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಭದ್ರತಾ ನಗರಿಯಾಗಿರುವ ಹಿನ್ನೆಲೆಯಲ್ಲಿ ಈ ಕೃತ್ಯಕ್ಕೆ ಎರಡನೇ ಶ್ರೇಣಿಯ ನಗರ ಎನಿಸಿರುವ ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಕರಣವನ್ನು ಕೂಡಲೇ ಬೇಧಿಸುವಲ್ಲಿ ಕಾರ್ಯೋನ್ಮುಖವಾಗಿರುವ ಪೊಲೀಸ್ ಇಲಾಖೆ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸುತ್ತಿದೆ ಎಂದು ನೀಲಮಣಿ ಎನ್.ರಾಜ್ ಸಭೆಗೆ ತಿಳಿಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಹಾಗೂ ತುಷಾರ್ ಗಿರಿನಾಥ್ ಮತ್ತಿತರರು ಪಾಲ್ಗೊಂಡಿದ್ದರು.
ರಾಜ್ಯಾದ್ಯಂತ ಬಿಗಿ ಭದ್ರತೆ
ಮೈಸೂರು ಸ್ಫೋಟ ಪ್ರಕರಣ ಹಾಗೂ ಆ.15ರ ಸ್ವಾತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸ್ ಬಿಗಿ ಭದ್ರತೆಗೆ ಸೂಚಿಸಲಾಗಿದೆ. ಈಗಿನಿಂದಲೆ ನಗರದ ಪ್ರಮುಖ ಬಸ್ ನಿಲ್ದಾಣಗಳು, ಮಾಲ್‌ಗಳು, ಸರಕಾರಿ ಕಟ್ಟಡಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ







