ಪರೀಕ್ಷಾ ಗೊಂದಲ ನಿವಾರಿಸಲು ಎಸ್‌ಎಫ್‌ಐ ಒತ್ತಾಯ
ಮಂಗಳೂರು, ಆ. 3: ಸ್ನಾತಕೋತ್ತರ ಪರೀಕ್ಷೆ ನಡೆದು ಎರಡು ತಿಂಗಳಾಗುತ್ತಿದ್ದರೂ ಫಲಿತಾಂಶ ಬಾರದೇ ಇದ್ದು ಕೂಡಲೇ ಫಲಿತಾಶ ಪ್ರಕಟಿಸುವಂತೆ ಹಾಗೂ ಪದವಿ ಕೋರ್ಸ್‌ಗಳ ಫಲಿತಾಂಶದಲ್ಲಿನ ಕೆಲವು ಗೊಂದಲಗಳನ್ನು ನಿವಾರಿಸಲು ಮತ್ತು ಸ್ನಾತಕೋತ್ತರ ವಿಭಾಗದ ಮರು ಮೌಲ್ಯ ಮಾಪನ ಶುಲ್ಕವನ್ನು ಇಳಿಸಲು ಒತ್ತಾಯಿಸಿ ವಿವಿಯ ಪರೀಕ್ಷಾಂಗ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು.
ವಿವಿಯ ಸ್ನಾತಕೋತ್ತರ ವಿಭಾಗದ ಫಲಿತಾಂಶ ಪ್ರಕಟನೆಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ಸಲ್ಲಿಸಿರುವ ಮನವಿಗೆ ಸ್ಪಂದಿಸಿರುವ ಕುಲಸಚಿವರು ಈ ವಾರದ ಒಳಗಡೆ ಎಲ್ಲಾ ಸ್ನಾತಕೋತ್ತರ ವಿಭಾಗದ ಫಲಿತಾಂಶ ಪ್ರಕಟಿಸಲಾಗುವುದು ಮತ್ತು ಪದವಿ ಕೋರ್ಸ್‌ಗಳ ಫಲಿತಾಂಶ ಕಳೆದ ಬಾರಿ ನಡೆದ ಗೊಂದಲಗಳನ್ನು ನಿವಾರಿಸಿದ್ದು ಈ ಬಾರಿ ಯಾವುದೇ ಗೊಂದಲ ಉಂಟಾಗದ ರೀತಿಯಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
ಕಳೆದ ಬಾರಿ ಸರಕಾರದ ಆದೇಶದಂತೆ ಹೊಸ ಸಾಫ್ಟ್‌ವೇರ್ ಅಳವಡಿಕೆಯಲ್ಲಿನ ತಾಂತ್ರಿಕತೆಯ ಕೊರತೆಯಿಂದ ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಅನೇಕ ಸಮಸ್ಯೆಗಳಾಗಿದ್ದು ಈ ಬಾರಿ ಆ ಬಗ್ಗೆ ಪುನರಾವರ್ತನೆಗೊಂಡಲ್ಲಿ ತನಿಖೆಗೆ ಆದೇಶಿಸಬೇಕು ಮತ್ತು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಬಾರಿಯ ಫಲಿತಾಂಶದಲ್ಲಿ ಯಾವುದೇ ವಿದ್ಯಾರ್ಥಿಗಳಿಗಾದರೂ ಅನ್ಯಾಯವಗಿದ್ದರೆ ಕೂಡಲೇ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ದ.ಕ ಜಿಲ್ಲಾ ಸಮಿತಿಯ ದೂರವಾಣಿ ಸಂಖ್ಯೆ 9164522324, 8050107203 ಸಂಖ್ಯೆಗೆ ವಿದ್ಯಾರ್ಥಿಗಳು ಸಂಪರ್ಕಿಸಬೇಕಾಗಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ನಿತಿನ್ ಕುತ್ತಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







