ಸೇತುವೆ ದುರಂತ; ಪರಿಹಾರಕ್ಕೆ ನೆರವು: ಕೊಂಕಣ ರೈಲ್ವೆಗೆ ಸಚಿವ ಪ್ರಭು ಸೂಚನೆ

ಉಡುಪಿ, ಆ.3: ಮಂಗಳವಾರ ಮಧ್ಯರಾತ್ರಿ ಸುಮಾರಿಗೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ಬಳಿ ಸಾವಿತ್ರಿ ನದಿಗೆ ನಿರ್ಮಿಸಲಾದ ಸೇತುವೆ ಕುಸಿದು ಸಂಭವಿಸಿದ ದುರಂತದ ಪರಿಹಾರ ಕಾರ್ಯಕ್ಕೆ ಸಾಧ್ಯವಿದ್ದ ನೆರವು ನೀಡುವಂತೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಕೊಂಕಣ ರೈಲ್ವೆಗೆ ಸೂಚನೆ ನೀಡಿದ್ದಾರೆ.
ಮುಂಬಯಿ-ಗೋವಾ ಹೈವೇಯಲ್ಲಿ ಮಹಾಡ್ ಬಳಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಈ ಸೇತುವೆ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಎರಡು ಬಸ್ ಸೇರಿದಂತೆ ಹಲವು ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ಇದೆ.
ಸಚಿವ ಸುರೇಶ್ ಪ್ರಭು ಅವರ ಸೂಚನೆಯಂತೆ ಸ್ಥಳಕೆ ಧಾವಿಸಿರುವ ಕೊಂಕಣ ರೈಲ್ವೆ ಮಹಾಡ್‌ನಲ್ಲಿ ರಾಜ್ಯ ಸರಕಾರ ಆರಂಭಿಸಿರುವ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೊಂಕಣ ರೈಲ್ವೆಯ ಸ್ವಯಂಚಾಲಿತ ಆಕ್ಸಿಡೆಂಟ್ ರಿಲೀಫ್ ಮೆಡಿಕಲ್ ವಾನ್, ಆಕ್ಸಿಡೆಂಟ್ ರಿಲೀಫ್ ಟ್ರೈನ್‌ನೊಂದಿಗೆ ಕೊಂಕಣ ರೈಲ್ವೆಯ ವೈದ್ಯರು, ವೈದ್ಯಕೀಯ ತಂಡ, ಇಂಜಿನಿಯರಿಂಗ್ ರಕ್ಷಣಾ ತಂಡ, ಮೆಕ್ಯಾನಿಕಲ್ ರಕ್ಷಣಾ ತಂಡಗಳೊಂದಿಗೆ, ನುರಿತ ತಜ್ಞರು ಸ್ಥಳಕೆ ಧಾವಿಸಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.







